-- ಕುರುಬೂರು ಶಾಂತಕುಮಾರ್ ಎಚ್ಚರಿಕೆ

----ಕನ್ನಡಪ್ರಭ ವಾರ್ತೆ ಮೈಸೂರು

ಗ್ರೀನ್ ಬಡ್ಸ್ ಸಂಸ್ಥೆಯಿಂದ ವಂಚನೆಗೆ ಒಳಗಾಗಿರುವ ಠೇವಣಿದಾರರಿಗೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.ನಗರದ ಗನ್ ಹೌಸ್ ಬಳಿಯಿರುವ ವಿಶ್ವಮಾನವ ಉದ್ಯಾನವನದಲ್ಲಿ ಶನಿವಾರ ನಡೆದ ವಂಚನೆಗೆ ಒಳಗಾದ ಗ್ರೀನ್ ಬರ್ಡ್ಸ್ ಠೇವಣಿದಾರರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಗ್ರೀನ್ ಬಡ್ಸ್ ಸಂಸ್ಥೆಯು ಠೇವಣಿದಾರ ಬಳಿ 150 ರಿಂದ 180 ಕೋಟಿ ಸಂಗ್ರಹಿಸಿ ವಂಚಿಸಿದೆ. ಠೇವಣಿದಾರರ ಹಣ ವಾಪಸ್ ಕೊಡಿಸಲು ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರ ರಚಿಸಿತ್ತು. ಜೊತೆಗೆ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತ್ತು. ಆ ಬಳಿಕ ಗ್ರೀನ್ ಬಡ್ಸ್ ಸಂಸ್ಥೆಗೆ ಸೇರಿದ ನೂರು ಕೋಟಿಗೂ ಹೆಚ್ಚಿನ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೂ ವಂಚನೆಗೆ ಒಳಗಾಗಿರುವ ಠೇವಣಿದಾರರಿಗೆ ಪರಿಹಾರ ದೊರಕಿಲ್ಲ ಎಂದು ಅವರು ಕಿಡಿಕಾರಿದರು.ಠೇವಣಿದಾರರಿಗೆ ಶೀಘ್ರವೇ ಪರಿಹಾರ ನೀಡದಿದ್ದರೆ ಮೇ 5 ರಂದು ಬೆಂಗಳೂರಿನ ವಿವಿ ಟವರ್ ನಲ್ಲಿರುವ ಸಕ್ಷಮ ಪ್ರಾಧಿಕಾರದ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಠೇವಣಿದಾರರ ಹೋರಾಟ ಸಮಿತಿ ರಾಜ್ಯ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಜಗದೀಶ್, ಚಿಕ್ಕನಾಯಕ, ಶಿವಕುಮಾರ್, ಮಾದೇವಪ್ಪ, ರೂಪಾ, ಸಿದ್ದರಾಜು, ಷಡಕ್ಷರಿ, ಶ್ರೀಕಂಠ, ನಂದನ್, ಹೇಮೇಶ್, ಮಂಜುನಾಥ್, ಬಸವರಾಜ್, ಅಶೋಕ್, ರಾಜಯ್ಯ ಶೆಟ್ಟಿ, ಗಿರೀಶ್, ರಾಜೇಶ್, ವೆಂಕಟೇಶ್, ಬಸಮ್ಮ, ಸಂತೋಷ್ ಮೊದಲಾದವರು ಇದ್ದರು.