ಕೋಟ: ಪ್ರಸ್ತುತ ತಾಪಮಾನಕ್ಕೆ ಇಡೀ ಮನುಕುಲ ಕಂಗೆಟ್ಟು ಕೂರುವಂತಾಗಿದೆ. ಇದಕ್ಕೆ ಕಾರಣಿಕರ್ತರು ನಾವುಗಳೇ, ಏಕೆಂದರೆ ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಹಸಿರನ್ನೇ ನಾಶ ಮಾಡಿದ್ದೇವೆ. ಆದ್ದರಿಂದ ಎಲ್ಲೆಲ್ಲೂ ಹಸಿರು ಅಭಿಯಾನಗಳು ನಡೆಯಬೇಕು. ಈ ಮೂಲಕ ವಾತಾವರಣ ವೈಪರೀತ್ಯಗಳನ್ನು ತಡೆಯುವ ಕಾರ್ಯ ಮಾಡಬೇಕು ಎಂದು ಸಾಮಾಜಿಕ ಚಿಂತಕ ಋಷಿರಾಜ್ ಸಾಸ್ತಾನ ನುಡಿದರು. ಪರಿಸರಪ್ರೇಮಿ ಕೊರವಡಿ ಶ್ವೇತ ಶ್ರೀನಿಧಿ ಉಪಾಧ್ಯಾಯರ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪೇತ್ರಿ ಅನ್ನಪೂರ್ಣ ನರ್ಸರಿ, ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಹಸಿರು ಹೆಜ್ಜೆ ಶೀರ್ಷಿಕೆಯಡಿ ೩೦೪ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಪಂಚವರ್ಣದ ಪ್ರಕೃತಿ ಆರಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಪಂಚವರ್ಣದ ಹಸಿರುಹೆಜ್ಜೆ ಮೂರು ತಿಂಗಳುಗಳ ಕಾಲ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಆಯೋಜನೆಗೊಳ್ಳಲಿದ್ದು, ಸೋಮವಾರ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಸರ ಪ್ರೇಮಿ ಶ್ವೇತಾ ಶ್ರೀನಿಧಿ ಉಪಾಧ್ಯಾಯರ ಪುತ್ರಿ ಸಿರಿಶ್ರೀ ಉಪಾಧ್ಯಾಯರಿಗೆ ಶುಭಾಶಯ ಪ್ರಯುಕ್ತ ಆಚರಿಸಲಾಯಿತು. ಗಿಡ ನಡುವ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಶತಾಯುಷಿ ನಿವೃತ್ತ ಶಿಕ್ಷಕ ವಿಷ್ಣುಮೂರ್ತಿ ಹತ್ವಾರ್ ಗಿಡ ನಡುವ ಮೂಲಕ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಮನೆ ಮನೆಗೆ ತೆರಳಿ ಪಾರಿಜಾತ ಹಾಗೂ ಲಕ್ಷ್ಮಣಫಲ ಗಿಡವನ್ನು ನೆಟ್ಟು ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಲಾಯಿತು. ಈ ಅಭಿಯಾನದಲ್ಲಿ ಪರಿಸರ ಜಾಗೃತಿಯ ಬಿತ್ತಿಪತ್ರವನ್ನು ಋಷಿರಾಜ್ ಸಾಸ್ತಾನ ಬಿಡುಗಡೆಗೊಳಿಸಿದರು. ಅಲ್ಲದೆ ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪ್ರತಿಜ್ಞಾ ವಿಧಿ ಭೋಧಿಸಿ, ಮಕ್ಕಳಿಗೆ ಪರಿಸರ ಜಾಗೃತಿ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ನಿವೃತ್ತ ಶಿಕ್ಷಕ ರಾಮಚಂದ್ರ ಉಪಾಧ್ಯಾಯ ಕೊರವಡಿ, ಕಸ್ತೂರಿ ಆರ್. ಉಪಾಧ್ಯಾಯ, ರೋಟರಿ ಸಮುದಾಯ ದಳ ಕೊರವಡಿ ಕಾರ್ಯದರ್ಶಿ ಗಣೇಶ್ ಭಟ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗ್ರಾಮದ ಪ್ರಮುಖರಾದ ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಸದಸ್ಯರಾದ ಪ್ರಭಾಕರ್ ಮಣೂರು ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.