ಸಾರಾಂಶ
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುವಿಶ್ವ ವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ರೈತ ದಸರಾ ಕಾರ್ಯಕ್ರಮಗಳಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ಶನಿವಾರ ಚಾಲನೆ ದೊರೆಯಿತು.
ಅರಮನೆಯ ಕೋಟೆ ಆಂಜನೇಯಸ್ವಾಮಿ ಮುಂಭಾಗದಲ್ಲಿ ರೈತರ ದಸರಾ ಮೆರವಣಿಗೆಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಅಲ್ಲದೇ, ಮೆರವಣಿಗೆಯಲ್ಲಿ ಸಾಗುತ್ತಿದ್ದ ಎತ್ತಿನಗಾಡಿಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಕೆ. ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ ಸಾಗುವ ಮೂಲಕ ಗಮನ ಸೆಳೆದರು.ರೈತ ದಸರಾ ಉದ್ಘಾಟನಾ ವೇದಿಕೆ ಮುಂಭಾಗದಲ್ಲಿ ಪುಷ್ಪ ರಂಗೋಲಿಯಲ್ಲಿ ಅನ್ನದಾತ ಸುಖೀಭವ... ನಮ್ಮ ರೈತ ನಮ್ಮ ಹೆಮ್ಮೆ ಎಂಬ ಬರಹವು ಇಡೀ ರೈತ ಕುಲದ ಮಹತ್ವವನ್ನು ಸಾರಿ ಹೇಳಿತು.
ಮೆರವಣಿಗೆಯಲ್ಲಿ ಬಂಡೂರು ಕುರಿಗಳು, ಹಳ್ಳಿಕಾರ್ ಎತ್ತುಗಳು, ಎತ್ತಿನ ಗಾಡಿಗಳೊಂದಿಗೆ ಕೃಷಿ ಔಷದ ಸಿಂಪಡಣ ಡ್ರೋನ್, ಕಬ್ಬು ಕಟಾವು ಯಂತ್ರ, ಕಬ್ಬು ನಾಟಿ ಯಂತ್ರ, ಬೂಮ್ ಸ್ಪೇರ್, ಕಂಬೈಂಡ್, ಹಾರ್ವೆಸ್ಟರ್, ಮಿನಿ ಕಾರ್ಟ್, ಬಯೋಜಾರ್ ಯಂತ್ರ ಸೇರಿದಂತೆ ಆಧುನಿಕ ಕೃಷಿ ಯಂತ್ರೋಪಕರಣಗಳು ಪಾಲ್ಗೊಂಡಿದ್ದವು.ಅಲ್ಲದೇ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸ್ತಬ್ಧಚಿತ್ರಗಳು ತಮ್ಮ ವ್ಯಾಪ್ತಿಯಲ್ಲಿ ರೈತರಿಗೆ ಲಭ್ಯವಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಅರಿವು ಮೂಡಿಸಿದವು.
ನಂದಿ ಧ್ವಜ, ಟಿಬೇಟಿಯನ್ ನೃತ್ಯ, ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ತಮಟೆ, ವೀರಗಾಸೆ, ಚಿಲಿಪಿಲಿ ಗೊಂಬೆ, ನಾದಸ್ವರ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರೈತ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾದ ರೈತ ದಸರಾ ಮೆರವಣಿಗೆಯೂ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ದಿವಾನ್ಸ್ ರಸ್ತೆಯ ಮೂಲಕ ಜೆ.ಕೆ. ಮೈದಾನಕ್ಕೆ ತಲುಪಿತು.ರೈತ ದಸರೆಗೆ ಅಪೂರ್ವ ಬೆಂಬಲ
ರೈತ ದಸರಾ ಮೆರವಣಿಗೆ ಉದ್ಘಾಟಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಮೈಸೂರೆಂಬ ಪುಣ್ಯ ನೆಲದದಲ್ಲಿ ರೈತ ದಸರಾ ಪ್ರತಿ ವರ್ಷ ಆಯೋಜಿಸುತ್ತಿದ್ದು, ಅಪೂರ್ವವಾದ ಬೆಂಬಲ ದೊರೆಯುತ್ತಿದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ಕಡಿಮೆಯಾಗಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು 1000 ಕೋಟಿ ಮಿಷನರಿಗೆ ಸಹಾಯಧನ ಹಾಗೂ ಅನುದಾನವನ್ನು ನೀಡುವುದರ ಜೊತೆಗೆ ರೈತರಿಗೆ 1900 ಕೋಟಿ ವಿಮೆ ನೀಡಿದ್ದಾರೆ. ಅದನ್ನು ಪ್ರತಿಯೊಬ್ಬ ರೈತರು ಸದುಪಯೋಗ ಪಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಸಾಗಿಸುವ ನಿಟ್ಟಿನಲ್ಲಿ ದುಡಿಯಬೇಕು ಎಂದು ಕರೆ ನೀಡಿದರು.ಪ್ರತಿಯೊಬ್ಬ ರೈತನಿಗೂ ತಾವು ಬೆಳೆದಂತ ಬೆಳೆಗಳು ಸುರಕ್ಷಿತವಾಗಿ ಕೈ ಸೇರಬೇಕು ಹಾಗೂ ಯಾವುದೇ ಅನ್ಯಾಯ ಆಗದಂತೆ ಅದಕ್ಕೆ ನ್ಯಾಯಯುತವಾದ ಬೆಲೆ ಸಿಗಬೇಕು. ನಮ್ಮ ಮೊದಲ ಆದ್ಯತೆ ರೈತರೇ ಆಗಿದ್ದು, ರೈತರಿಗೆ ಸಾಲವನ್ನು ನೀಡುವ ಮೂಲಕ ಕೃಷಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರದಿಂದ ಸಿದ್ಧವಿದೆ ಎಂದು ಅವರು ತಿಳಿಸಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಕೆ. ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ರೈತ ದಸರಾ ಸಮಿತಿಯ ಅಧ್ಯಕ್ಷ ಕರೀಗೌಡ, ಉಪಾಧ್ಯಕ್ಷರಾದ ಜಾಕೀರ್ ಹುಸೇನ್, ಶಿವಕುಮಾರ್, ಮಂಜುನಾಥ್ ಮೊದಲಾದವರು ಇದ್ದರು.ನಮ್ಮಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಲ್ಲಿದ್ದರೂ ಅವುಗಳನ್ನು ರೈತರು ಅಳವಡಿಸಿಕೊಳ್ಳುವುದು ಕಡಿಮೆಯಾಗಿದೆ. ಪ್ರತಿಯೊಬ್ಬ ರೈತರು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಅವರಿಗೆ ಸಹಾಯದ ಜೊತೆಗೆ ಖರ್ಚು ಕಡಿಮೆಯಾಗುತ್ತದೆ. ಇದರಿಂದ ಉತ್ತಮ ಆದಾಯವನ್ನೂ ಪ್ರತಿಯೊಬ್ಬ ರೈತರು ಪಡೆದುಕೊಳ್ಳಬಹುದು. ರೈತರ ಅನೇಕ ಸಮಸ್ಯೆಗಳಿಗೆ ಹೊಸ ಹೊಸ ಯೋಜನೆ ಮೂಲಕ ಸಹಾಯ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ.- ಕೆ.ವೆಂಕಟೇಶ್, ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವರು