ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿಂತೆಯ ವಿಷಯ
ಕುಷ್ಟಗಿ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಹಾಗೂ ಹಸಿರು ವಾತಾವರಣ ನಿರ್ಮಾಣ ಮಾಡುವುದು ಅಗತ್ಯ. ಶಾಲಾ ಆವರಣ ಸ್ವಚ್ಛವಾಗಿದ್ದು, ಹಸಿರಿನಿಂದ ಕಂಗೊಳಿಸಿದರೆ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸಲು ಸಾಧ್ಯ ಎಂದು ಬಿಇಒ ಉಮಾದೇವಿ ಬಸಾಪುರ ಹೇಳಿದರು.
ಪಟ್ಟಣದ ಹನಮಸಾಗರ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಶಾಲೆಗಳಲ್ಲಿ ಹಸಿರು ಪರಿಸರ, ಸ್ವಚ್ಛತೆ ಹಾಗೂ ಆಕರ್ಷಕ ವಾತಾವರಣ ನಿರ್ಮಿಸಬೇಕು. ಸ್ಮಾರ್ಟ್ ತರಗತಿ ಕೊಠಡಿ, ಗ್ರೀನ್ ಬೋರ್ಡ್, ಡೆಸ್ಕ್-ಬೆಂಚ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವುದರ ಜತೆಗೆ ಶಾಲಾ ಆವರಣ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂದರು.
ಪಾಲಕರಲ್ಲಿ ಇಂಗ್ಲಿಷ್ ಮಾಧ್ಯಮದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಆದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ ಎನ್ನುವುದಕ್ಕಿಂತ ಅವರಿಗೆ ದೊರೆಯುವ ಶಿಕ್ಷಣದ ಗುಣಮಟ್ಟ, ಮೌಲ್ಯ ಹಾಗೂ ಸಂಸ್ಕಾರ ಮುಖ್ಯ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಮೌಲ್ಯ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.ಶಿಕ್ಷಕರ ಸಂಘವು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವುದು ಶ್ಲಾಘನೀಯ. ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ಇತರ ಸಂಘಟನೆಗಳಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಪ್ರಕೃತಿಯು ಮನುಷ್ಯನಿಗೆ ನೀಡಿರುವ ಅಮೂಲ್ಯ ಕೊಡುಗೆ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪರಿಸರ ನಾಶವಾದರೆ ಮಾನವ ಬದುಕಿನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಮರಗಳು ನೆರಳು ನೀಡುವುದರ ಜತೆಗೆ ಶುದ್ಧ ಗಾಳಿ, ಹಣ್ಣು, ಮಳೆ ಹಾಗೂ ಜೀವಜಗತ್ತಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮುಂದಿನ ಪೀಳಿಗೆಯ ಬದುಕಿಗೂ ಮರಗಳ ಸಂರಕ್ಷಣೆ ಅತ್ಯಗತ್ಯ ಎಂದು ಹೇಳಿದರು.ನದಿಗಳು ತಮ್ಮ ನೀರನ್ನು ಎಲ್ಲರಿಗೂ ನೀಡುವಂತೆ ಮರಗಳು ಸಹ ಜೀವಜಗತ್ತಿಗೆ ಅನೇಕ ರೀತಿಯಲ್ಲಿ ಕೊಡುಗೆ ನೀಡುತ್ತವೆ. ಆದ್ದರಿಂದ ಪರಿಸರ ಸಂರಕ್ಷಣೆ ಸರ್ಕಾರದ ಕೆಲಸ ಎಂದು ಭಾವಿಸದೇ ಪ್ರತಿಯೊಬ್ಬರೂ ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿ ನೆಟ್ಟು ಅವುಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಾ ಹಿರೇಮನಿ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬೀರಪ್ಪ ಕುರಿ, ನಾಗಪ್ಪ ಬಿಳಿಯಪ್ಪನವರ್, ಶಿವಾನಂದ ಪಂಪಣ್ಣನವರ್, ಮಲ್ಲಮ್ಮ ಚನ್ನಪ್ಪನವರ್, ಮುಖ್ಯಶಿಕ್ಷಕಿ ಶರಣಮ್ಮ ಪೆದ್ದಿ, ರಾಘಪ್ಪ ಶ್ರೀರಾಮ್, ಬಸವರಾಜ ಹೊಸಮನಿ, ವಿಜಯಲಕ್ಷ್ಮಿ ಹಿರೇಮಠ, ಶಶಿಕಲಾ ಪಾಟೀಲ, ಮಹೇಶ್ ಪಡಿ, ಪ್ರಭಾವತಿ ಮಾಳಗಿ, ಅಯ್ಯಪ್ಪ ಸುರುಳ, ಗಿರಿಜಾ ದೇಸಾಯಿ, ಇಮಾಮ್ ಸಾಬ್, ಚಂದಪ್ಪ ಕರಡಿ, ಹನಮಗೌಡ ಗೌಡ್ರ, ಬಸವರಾಜ ಗುರಿಕಾರ, ಸಂತೋಷ ತೋಟದ್, ಗ್ಯಾನಪ್ಪ, ವಿಠ್ಠಲ, ಬಸವರಾಜ ಹೊಸಮನಿ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿ, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಶರಣಪ್ಪ ತಮ್ಮಿನಾಳ ಸ್ವಾಗತಿಸಿದರು.ಶಿವಪ್ಪ ವಾಗ್ಮೊರೆ ನಿರೂಪಿಸಿದರು.