ಸಾರಾಂಶ
ಅಯೋಧ್ಯೆಯಲ್ಲಿ ರಾಮೋತ್ಸವ ಹೊತ್ತಿನಲ್ಲಿಯೇ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಕಿಡಿಗೇಡಿತನ ಮೆರೆದ ಪಟ್ಟಣದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.
ಗಜೇಂದ್ರಗಡ: ಅಯೋಧ್ಯೆಯಲ್ಲಿ ರಾಮೋತ್ಸವ ಹೊತ್ತಿನಲ್ಲಿಯೇ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಕಿಡಿಗೇಡಿತನ ಮೆರೆದ ಪಟ್ಟಣದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.ಇಲ್ಲಿನ ಹಿರೇಬಜಾರ ನಿವಾಸಿ ತಾಜುದ್ದೀನ್ ದಪೇದಾರ್ ಎಂಬ ಯುವಕ ತನ್ನ ಫೇಸ್‌ಬುಕ್ ಖಾತೆಯಲ್ಲಿ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಪೋಸ್ಟ್ ಹಾಕಿದ್ದು, ಅದು ವೈರಲ್ ಆಗುತ್ತಿದ್ದಂತೆ ಇಲ್ಲಿನ ಹಿಂದೂಪರ ಸಂಘಟನೆಗಳ ಮುಖಂಡರು ಭಾನುವಾರ ತಡರಾತ್ರಿ ಸ್ಥಳೀಯ ಪೊಲೀಸ್ ಠಾಣೆ ಎದುರು ಜಮಾಯಿಸಿ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಯುವಕನನ್ನು ಬಂಧಿಸುವಂತೆ ಆಗ್ರಹಿಸಿದರು.
ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪಿಎಸ್‌ಐ ಸೋಮನಗೌಡ ಗೌಡರ ಯುವಕ ತಾಜುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಠಾಣೆಯ ಮುಂಭಾಗದಲ್ಲಿ ಜಮಾವಣೆಗೊಂಡಿದ್ದ ವಿಎಚ್‌ಪಿ, ಬಜರಂಗ ದಳ ಕಾರ್ಯಕರ್ತರು, ಸಮಾಜದಲ್ಲಿ ಕೆಲವರು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನಮ್ಮ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದ ಯುವಕನ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಪ್ಪಿತಸ್ಥನ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುವುದು ಎಂದು ಪಿಎಸ್‌ಐ ಸೋಮನಗೌಡ ಸಮಾಧಾನಪಡಿಸಿದರು.ಈ ಘಟನೆ ಕುರಿತಂತೆ ರವಿ ಕಲಾಲ ದೂರು ನೀಡಿದ್ದು, ಪಟ್ಟಣದ ತಾಜುದ್ದೀನ ದಪೇದಾರ್, ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯ ಎತ್ತಿ ಕಟ್ಟುವ ಉದ್ದೇಶದಿಂದ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.