ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಅರಣ್ಯ ಸಂಪತ್ತು ನಾಶದ ನಡುವೆಯೂ ತೀರಾ ಅಪರೂಪ ಎನಿಸಿರುವ ಬಿದಿರು ಸಸ್ಯದ ಅರಿವು ಹೆಚ್ಚಿಸಲು ಮತ್ತು ಅದರ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ವಿನಾಶದ ಅಂಚಿನಲ್ಲಿರುವ ಬಿದಿರು ಸಸ್ಯಗಳನ್ನು ನಾಟಿ ಮಾಡಿ ಪೋಷಿಸಲು ಮುಂದಾಗಿದೆ.ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಮುಂಭಾಗದಲ್ಲಿ ನಿರ್ಮಾಣ ಹಂತದ ರಾಜಾ ಲಖಮಗೌಡ ಉದ್ಯಾನಕಾಶಿ ಬಳಿ ಬಿದಿರು ಜೀವ ವೈವಿಧ್ಯವನ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅರಣ್ಯ ಇಲಾಖೆಯು ಈ ಮಹತ್ವಾಕಾಂಕ್ಷಿ ಬಿದಿರು ಜೀವ ವೈವಿಧ್ಯವನ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ. ತನ್ಮೂಲಕ ಹಿಡಕಲ್ ಡ್ಯಾಮ್ ರಾಜ್ಯದಲ್ಲಿಯೇ ಬಿದಿರು ವೈವಿಧ್ಯವನ ಹೊಂದಿದ ಮೊಟ್ಟ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರೊಂದಿಗೆ ಈ ಘಟಪ್ರಭಾ ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ ಬಿದಿರಿನ ಬೆಳೆ ನಳನಳಿಸಲಿದೆ.
2024-25ನೇ ಸಾಲಿನ ಕಾಪಿಟಲ್ ಕ್ವಾಲಿಟಿ ಆನ್ ಫಾರೆಸ್ಟ್ ಮತ್ತು ವೈಲ್ಡ್‌ಫೀ-01 ಫಂಡ್-139 ಮೇಜರ್ ವರ್ಕ್ ಹೊಸ ವೃಕ್ಷೋದ್ಯಾನ-ಟ್ರೀ ಪಾರ್ಕ್ ನಿರ್ಮಾಣದಡಿ ಹಿಡಕಲ್ ಜಲಾಶಯ ಬಳಿ ಬಿದಿರು ಜೀವ ವೈವಿಧ್ಯ ಉದ್ಯಾನ ನಿರ್ಮಾಣವಾಗಲಿದೆ. ಇದಕ್ಕಾಗಿ ₹1 ಕೋಟಿ ಮಂಜೂರಾಗಿದ್ದು ಪ್ರಾದೇಶಿಕ ಅರಣ್ಯ ವಲಯದಿಂದ ಸುಮಾರು 20 ಎಕರೆ ಪ್ರದೇಶದಲ್ಲಿ 100ಕ್ಕೂ ಹೆಚ್ಚಿನ ವಿವಿಧ ಜಾತಿಯ ಬಿದಿರು ಸಸ್ಯ ನಾಟಿ ಮಾಡಿ ಪೋಷಿಸುವ ಗುರಿ ಹೊಂದಲಾಗಿದೆ.ಹಿಡಕಲ್ ಜಲಾಶಯ ಬಳಿ ಈಗಾಗಲೇ ಚಿಟ್ಟೆ ಪಾರ್ಕ್ ಸ್ಥಾಪನೆ ಮತ್ತು ಕೆರೆಗಳು ನಿರ್ಮಾಣವಾಗಿದ್ದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯ ನಿರ್ಮಾಣ ಹಂತದಲ್ಲಿವೆ. ಇದೀಗ ಬಿದಿರು ಜೀವ ವೈವಿಧ್ಯವನ ಸ್ಥಾಪಿಸಲು ಸರ್ಕಾರ ಉತ್ಸುಕತೆ ತೋರಿದೆ. ಇದರಿಂದ ಈ ಪರಿಸರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹೊಸ ರೀತಿಯ ವಿಭಿನ್ನ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುತ್ತಿವೆ.
ಈ ಪ್ರದೇಶದಲ್ಲಿ ಬಿದಿರು ಜೀವ ವೈವಿಧ್ಯವನ ನಿರ್ಮಿಸುವ ಮೂಲಕ ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸ್ಥಳೀಯವಾಗಿ ಸಾಂಪ್ರದಾಯಿಕ ಬಳಕೆಗಳನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ಬಿದಿರು ಕಾಡು ಬೆಳೆಯಾದರೂ ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಬೆಳೆಯಲಾಗುತ್ತಿದೆ. ಹಾಗಾಗಿ ವಾಣಿಜ್ಯ ಬೆಳೆ ಎನಿಸಿರುವ ಬಿದಿರಿನಿಂದ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ.ಬಿದಿರು ಬೆಳೆಯಿಂದ ಉಪಯೋಗಗಳೇನು?:
ಆಕ್ಸಿಜನ್ ಬಿಡುಗಡೆಯಲ್ಲಿಯೂ ಬಿದಿರಿಗೆ ಪ್ರಮುಖ ಸ್ಥಾನವಿದೆ. ಆರೋಗ್ಯಕ್ಕೆ ಅನುಕೂಲಕರ ಮತ್ತು ಉತ್ಕೃಷ್ಠ ರೋಗ ನಿರೋಧಕ ಶಕ್ತಿಗೆ ಅಗತ್ಯ ಎನಿಸಿದೆ. ಪಿಠೋಪಕರಣಗಳು, ಕಾಗದ, ತೆಪ್ಪ-ದೋಣಿ ತಯಾರಿಕೆ, ಕಟ್ಟಡ ಕಟ್ಟಲು, ರಸ್ತೆ, ಸೇತುವೆ ನಿರ್ಮಾಣ, ಎಥೆನಾಲ್ ಹಾಗೂ ಔಷಧಿ ತಯಾರಿಕೆ, ಕ್ಯಾನ್ಸರ್ ಚಿಕಿತ್ಸೆ, ಬಟ್ಟೆ, ಕರಕುಶಲ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆ, ಸೌಂದರ್ಯವರ್ಧಕ ಸಿದ್ಧಗೊಳಿಸಲು ಮತ್ತು ನೈಸರ್ಗಿಕ ಆಹಾರ ಸಂರಕ್ಷಣೆಗೆ ಬಿದಿರು ಅಗತ್ಯ ಎನ್ನುವುದು ಈಗಾಗಲೇ ನಿರೂಪಿತವಾಗಿದೆ. ಈ ಎಲ್ಲ ವಿಚಾರಗಳನ್ನು ಅರಿತಿರುವ ಸರ್ಕಾರ ಬಹುಪಯೋಗಿ ಈ ಬಿದಿರು ಸಸಿ ಬೆಳೆಯಲು ನಿರ್ಧರಿಸಿದೆ.ಬಿದಿರಿನ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹುಕ್ಕೇರಿ ತಾಲೂಕು ಹಿಡಕಲ್ ಜಲಾಶಯ ಹತ್ತಿರ ಬಿದಿರು ಜೀವ ವೈವಿಧ್ಯವನ ನಿರ್ಮಿಸಲಾಗುತ್ತಿದೆ. ಜೊತೆಗೆ ಬರುವ ದಿನಗಳಲ್ಲಿ ಇಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಚಿಂತನೆಯಿದೆ.
ನಿಖಿಲ್ ಕತ್ತಿ, ಶಾಸಕರು