ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಯ ಕನಸು ನನಸಾಗುತ್ತಿದೆ. ಶೀಘ್ರವೇ ಈ ಕೇಂದ್ರವನ್ನು ಮಂಡ್ಯದಲ್ಲಿ ಆರಂಭಿಸುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಾಗರೀಕ ಸೇವೆಗಳನ್ನು ಸುಲಭ ಮತ್ತು ತ್ವರಿತಗತಿಯಲ್ಲಿ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸಂಕಲ್ಪದಂತೆ ಮಂಡ್ಯದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆಧಾರ್ ಸೇವಾ ಕೇಂದ್ರದ ಸ್ಥಾಪನೆ ಬಗ್ಗೆ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಜೊತೆಗೆ ಈ ಬಗ್ಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿ ಜಿಲ್ಲೆಯಲ್ಲಿ ಆಧಾರ್ ವಿವರಗಳ ದಾಖಲಾತಿ ಮತ್ತು ನವೀಕರಣ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಿದ್ದರು.

ಮಂಡ್ಯದಲ್ಲಿ ಆಧಾರ್ ದಾಖಲಾತಿ ಮತ್ತು ನವೀಕರಣ ಪ್ರಕ್ರಿಯೆಗಳು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೈತರು ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಅನಾನುಕೂಲ ಅನುಭವಿಸುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿ ವೇತನ ಪಡೆಯುವುದು, ಪರೀಕ್ಷೆಗಳು, ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಗಳು ಮತ್ತು ಇತರ ಹಲವಾರು ಸರ್ಕಾರಿ ಸೇವೆಗಳಿಗೆ ಆಧಾರ್ ಸೇವೆಗಳು ಅನಿವಾರ್ಯವಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಶಾಶ್ವತ ಆಧಾರ್ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂಬ ಅಂಶವನ್ನು ಅಶ್ವಿನಿ ವೈಷ್ಣವ್ ಅವರಿಗೆ ಸಚಿವ ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟಿದ್ದರು.


ಸಚಿವರ ಮನವಿಯನ್ನು ಪುರಸ್ಕರಿಸಿರುವ ಅಶ್ವಿನಿ ವೈಷ್ಣವ್ ಅವರು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪರಿಶೀಲಿಸಿದ್ದು, ಆಧಾರ್ ದಾಖಲಾತಿ ಮತ್ತು ನವೀಕರಣ ಸೇವೆಗಳು ಪ್ರಸ್ತುತ ಜಿಲ್ಲೆಯಾದ್ಯಂತ 110 ಕಾರ್ಯಾಚರಣಾ ದಾಖಲಾತಿ ಕಿಟ್‌ಗಳ ಮೂಲಕ ಲಭ್ಯವಿದ್ದರೂ ಯುಐಡಿಎಐ ಈಗ ಮಂಡ್ಯದಲ್ಲಿ ನಾಲ್ಕು ದಾಖಲಾತಿ ಕಿಟ್‌ಗಳೊಂದಿಗೆ ಆಧಾರ್ ಸೇವಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ಜಿಲ್ಲೆಯ ಆಧಾರ್ ಸೇವಾ ಮೂಲ ಸೌಕರ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹೊಸ ಸೌಲಭ್ಯವು ಮಂಡ್ಯ ನಗರ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ನಿವಾಸಿಗಳಿಗೆ ಆಧಾರ್ನ್ನು ತ್ವರಿತವಾಗಿ ಪಡೆಯುವುದು ಸಾಧ್ಯವಾಗುತ್ತದೆ.

ಅಶ್ವಿನಿ ವೈಷ್ಣವ್ ಅವರಿಗೆ ಸಚಿವರ ಧನ್ಯವಾದ:

ಸಕ್ಕರೆನಾಡಿನ ಜನತೆಯ ದೀರ್ಘ ಕಾಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಂಡ್ಯದಲ್ಲಿ ‘ಆಧಾರ್ ಸೇವಾ ಕೇಂದ್ರ’ ಸ್ಥಾಪಿಸಲು ಭಾರತ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

‘ಡಿಜಿಟಲ್ ಇಂಡಿಯಾ’ವನ್ನು ಬಲಪಡಿಸುವ ಹಾಗೂ ತಳಮಟ್ಟದಲ್ಲಿ ಸಮರ್ಥ, ಸುಲಭವಾಗಿ ಲಭ್ಯವಿರುವ ಮತ್ತು ತಂತ್ರಜ್ಞಾನ ಆಧರಿತ ಸಾರ್ವಜನಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ. ಮಂಡ್ಯ ಜಿಲ್ಲೆಗೆ ಆಧಾರ್ ಸೇವಾ ಕೇಂದ್ರ ವರದಾನವಾಗಲಿದೆ ಎಂದು ಅವರು ಹೇಳಿದ್ದಾರೆ.