ಪಟ್ಟಣದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ದಿಸೆಯಲ್ಲಿ ಸರ್ಕಾರವು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಯೋಜನಾ ಇಲಾಖೆಯು ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದು, ಪಟ್ಟಣದ ಸುತ್ತ ರಸ್ತೆ ನಿರ್ಮಿಸಲು ಸರ್ಕಾರವು ಹಸಿರು ನಿಶಾನೆ ನೀಡಿದೆ.

ಉದ್ದೇಶಿತ ರಸ್ತೆಯ ನಿರ್ಮಾಣದಿಂದ ರೈತ ಸಮೂಹದಲ್ಲಿ ಆತಂಕ; ಆಕ್ಷೇಪಣೆಗೆ ಅವಕಾಶ

ಎಸ್.ಎಂ.ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ದಿಸೆಯಲ್ಲಿ ಸರ್ಕಾರವು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಯೋಜನಾ ಇಲಾಖೆಯು ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದು, ಪಟ್ಟಣದ ಸುತ್ತ ರಸ್ತೆ ನಿರ್ಮಿಸಲು ಸರ್ಕಾರವು ಹಸಿರು ನಿಶಾನೆ ನೀಡಿದೆ.

ರಾಜ್ಯದ ೨೭ ಜಿಲ್ಲೆಯ ೧೦೮ ಸಣ್ಣ ಹಾಗೂ ಮಧ್ಯಮ ಪಟ್ಟಣಗಳಲ್ಲಿ ಜಿಐಎಸ್ ಆಧಾರಿತ ರೋಡ್ ನೆಟ್ ವರ್ಕಿಂಗ್ ಗ್ರಿಡ್ ಪ್ಲಾನ್ ಅಡಿ ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಆರ್ಥಿಕ ವಿಕೇಂದ್ರೀಕರಣಕ್ಕಾಗಿ ವರ್ತುಲ ರಸ್ತೆ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದೆ. ಅದರಂತೆ ಜಿಲ್ಲೆಯ ಗಜೇಂದ್ರಗಡ, ಮುಳಗುಂದ, ಮುಂಡರಗಿ ಹಾಗೂ ನರೇಗಲ್ಲ ಪಟ್ಟಣಗಳಲ್ಲೂ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ನಿಯೋಜಿತ ವರ್ತುಲ ರಸ್ತೆಯು ೧೦೦ ಅಡಿ ಆಗಲ, ಎರಡು ಬದಿ 2 ಕಿಮೀ ಪ್ರಭಾವ ವಲಯ ಎಂದು ಗುರುತಿಸಲಾಗಿದೆ.

ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣದಿಂದ ಪಟ್ಟಣದ ಒಳಭಾಗದ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಿ, ಸುತ್ತಲಿನ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಸಹಕಾರಿ ಆಗಲಿದೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರುವ ವಾಹನಗಳು ಪಟ್ಟಣದೊಳಗೆ ಪ್ರವೇಶಿಸದೇ ಪರ್ಯಾಯವಾಗಿ ಸಂಚಾರಿಸಲು ಸಾಧ್ಯ ಆಗುವುದರಿಂದ ಸಂಚಾರ ಸುಗಮಗೊಳ್ಳುವ ನಿರೀಕ್ಷೆ ಇದೆ. ಆದರೆ ಪಟ್ಟಣದಲ್ಲಿ ವಾಹನಗಳು ನಿಲುಗಡೆಯಾದರೆ ಇಲ್ಲಿನ ಐತಿಹಾಸಿಕ ಸ್ಥಳಗಳ ಮಾಹಿತಿ ಮತ್ತು ಭೇಟಿಯಿಂದ ವ್ಯಾಪಾರ-ವಹಿವಾಟು ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಈಗ ಪಟ್ಟಣದ ಹೊರಭಾಗದಿಂದಲೇ ವಾಹನಗಳು ಸಂಚಾರ ಮಾಡುವುದರಿಂದ ಪಟ್ಟಣದಲ್ಲಿನ ವ್ಯಾಪಾರ ವಹಿವಾಟಿನ ಮೇಲೆ ಬರೆ ಬಿಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿದೆರೆ, ಇನ್ನೂ ಕೆಲವರು ಆರ್ಥಿಕ ಸಬಲೀಕರಣಕ್ಕೆ ವರ್ತುಲ ರಸ್ತೆ ಸಹಾಯಕವಾಗಲಿದೆ ಎನ್ನುತ್ತಿದ್ದಾರೆ.

ಪಟ್ಟಣವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಗಜೇಂದ್ರಗಡ ಗಡಿರೇಖೆ ವ್ಯಾಪ್ತಿಯ ವೀರಾಪೂರ, ಚಿಲ್‌ಝರಿ, ಪುರ್ತಗೇರಿ, ಗೌಡಗೇರಿ ಗ್ರಾಮಗಳನ್ನು ಒಳಗೊಂಡು ವರ್ತುಲ ರಸ್ತೆ ನಿರ್ಮಾಣವಾಗಲಿದೆ. ಗಜೇಂದ್ರಗಡ ಪಟ್ಟಣ ಸೇರಿದಂತೆ ತಾಲೂಕಿನ ಕುಂಟೋಜಿ, ರಾಜೂರು, ರಾಮಾಪೂರ ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮಗಳ ಜಮೀನುಗಳನ್ನು ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಟ್ಟಣದ ಪುರಸಭೆ ಸೂಚನಾ ಫಲಕದಲ್ಲಿ ಈಗಾಗಲೇ ವರ್ತುಲ ರಸ್ತೆ ನಕ್ಷೆ ಹಾಗೂ ನಿಬಂಧನೆಗಳನ್ನು ಒಳಗೊಂಡ ಸರ್ಕಾರದ ಆದೇಶ ಪ್ರತಿ ಅಂಟಿಸಲಾಗಿದೆ. ವರ್ತುಲ ರಸ್ತೆ ನಿರ್ಮಾಣದ ಸುತ್ತಲಿನ ಗ್ರಾಪಂ ಪಿಡಿಒಗಳಿಗೂ ಅಧಿಸೂಚನೆಯ ಪ್ರತಿ ರವಾನಿಸಲಾಗಿದೆ. ಪುರಸಭೆ ಮತ್ತು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ಕಾರದ ಅಧಿಸೂಚನೆ ನಿಯೋಜಿತ ನಕ್ಷೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಆದೇಶಿಸಲಾಗಿದೆ. ವರ್ತುಲ ನಿರ್ಮಿಸುವ ಕುರಿತು ಅಧಿಸೂಚನೆ ಹೊರಡಿಸಿದ ದಿನದಿಂದ ಸೂಚನೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ೬೦ ದಿನಗಳ ಒಳಗೆ ಸಾರ್ವಜನಿಕರು ನಗರ ಮತ್ತು ಯೋಜನಾ ಇಲಾಖೆಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದೂ ಯೋಜನಾ ಇಲಾಖೆ ತಿಳಿಸಿದೆ.

ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಿಸಲು ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಡಲಿದ್ದು, ರಸ್ತೆಯ ಎರಡೂ ಬದಿಯಲ್ಲಿ ೨ ಕಿಮೀ ಜಮೀನುಗಳನ್ನು ಪ್ರಭಾವ ವಲಯವೆಂದು ಗುರುತಿಸಲಾಗಿದೆ. ಪರಿಣಾಮ ಈ ಪ್ರದೇಶದ ಕೃಷಿ ಜಮೀನುಗಳನ್ನು ಇತರ ಉದ್ದೇಶಗಳಿಗೆ ಬಳಸಲು ಹಾಗೂ ಕೃಷಿಯೇತರ ಜಮೀನಾಗಿ ಪರಿವರ್ತಿಸಲು ಅವಕಾಶಕ್ಕೆ ಕಡಿವಾಣ ಹಾಕಲಾಗುತ್ತದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟರೆ ಕೃಷಿ ಜೀವನೋಪಾಯಕ್ಕೆ ತೊಂದರೆಯಾಗಲಿದ್ದು, ಜಮೀನನ್ನು ಇತರ ಉದ್ದೇಶಕ್ಕೆ ಒಳಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಬಹುದು ಎಂದು ವರ್ತುಲ ರಸ್ತೆಯ ನಿರ್ಮಾಣದ ಭಾಧಿತ ಪ್ರದೇಶದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣ ಹಿನ್ನೆಲೆ ಬಂದಿರುವ ಅಧಿಸೂಚನೆಯನ್ನು ಪುರಸಭೆ ಸೂಚನಾ ಫಲಕದಲ್ಲಿ ಅಂಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದ್ದಾರೆ.