ಸಾರಾಂಶ
ಸುಮಾರು ೧೦ ಸಾವಿರ ಗಿಡಗಳನ್ನು ವಿತರಣೆ ಮಾಡಲಾಗುತ್ತಿದ್ದು, ಶಾಲೆಯ ಪ್ರತಿ ವಿದ್ಯಾರ್ಥಿಗೂ ೩-೨ ಸಸಿಗಳನ್ನು ನೀಡಿ ತಮ್ಮ ಮನೆಯ ಆವರಣದಲ್ಲಿ ನೆಡುವಂತೆ ತಿಳಿಸಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸಸಿ ನೀಡುವ ಜೊತೆಗೆ ಪೋಷಣೆ ಮಾಡುವಂತೆ ತಿಳಿಸಲಾಗಿದ್ದು. ಪ್ರತಿ ವರ್ಷವೂ ಉತ್ತಮವಾಗಿ ಸಸಿಯನ್ನು ಪೋಷಣೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಹಾಗೂ ಪ್ರೋತ್ಸಾಹಿಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿಯಿಂದ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಪ್ರಕೃತಿಯ ಜೊತೆಗೆ ಒಡನಾಟ ಬೆಳೆಯುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಟೈಮ್ಸ್ ಇಂಟರ್‌ನ್ಯಾಷನಲ್ ಶಾಲೆ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಸಹಯೋಗದಲ್ಲಿ ಟೈಮ್ಸ್ ಸಮೂಹ ಸಂಸ್ಥೆಗಳ ವತಿಯಿಂದ ಹತ್ತು ಸಾವಿರ ಗಿಡ ನೆಡುವ ಹಸಿರು ಸಿರಿ ಸಸ್ಯೋತ್ಸವ ಕಾರ್ಯಕ್ರಮವನ್ನು ಜುಲೈ ೧೯ರ ಶನಿವಾರದಂದು ಹಮ್ಮಿಕೊಂಡಿರುವುದಾಗಿ ಟೈಮ್ಸ್ ಸಂಸ್ಥೆ ಕಾರ್ಯದರ್ಶಿ ಹಾಗೂ ಅಕ್ಷರ ಅಕಾಡೆಮಿ ಸ್ಥಾಪಕ ಟೈಮ್ಸ್ ಗಂಗಾಧರ್ ಬಿ.ಕೆ. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಜುಲೈ ೧೯ರ ಶನಿವಾರ ಬೆಳಿಗ್ಗೆ ೧೦ಕ್ಕೆ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್‌ನ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್, ಜೋನಲ್ ಲೆಫ್ಟಿನೆಂಟ್ ಮಮತ ಪಾಟೀಲ್ ಭಾಗವಹಿಸಲಿದ್ದಾರೆ. ಕಳೆದ ೨ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗಿಡ ವಿತರಿಸುವ ಹಾಗೂ ಘೋಷಣೆ ಮಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿಯೂ ಸುಮಾರು ೧೦ ಸಾವಿರ ಗಿಡಗಳನ್ನು ವಿತರಣೆ ಮಾಡಲಾಗುತ್ತಿದ್ದು, ಶಾಲೆಯ ಪ್ರತಿ ವಿದ್ಯಾರ್ಥಿಗೂ ೩-೨ ಸಸಿಗಳನ್ನು ನೀಡಿ ತಮ್ಮ ಮನೆಯ ಆವರಣದಲ್ಲಿ ನೆಡುವಂತೆ ತಿಳಿಸಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸಸಿ ನೀಡುವ ಜೊತೆಗೆ ಪೋಷಣೆ ಮಾಡುವಂತೆ ತಿಳಿಸಲಾಗಿದ್ದು. ಪ್ರತಿ ವರ್ಷವೂ ಉತ್ತಮವಾಗಿ ಸಸಿಯನ್ನು ಪೋಷಣೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಹಾಗೂ ಪ್ರೋತ್ಸಾಹಿಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿಯಿಂದ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಪ್ರಕೃತಿಯ ಜೊತೆಗೆ ಒಡನಾಟ ಬೆಳೆಯುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಅನಾದಿಕಾಲದಿಂದ ಮನುಷ್ಯನು ಪರಿಸರದೊಂದಿಗೆ ಅವಿನಾಭಾವ ಸಂಬಂಧವನ್ನು ಬೆಸೆದುಕೊಂಡು ಜೀವಿಸುತ್ತಿದ್ದಾನೆ. ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ದೊರೆಯುತ್ತದೆ. ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಯು ಕಳೆದ ೨೦೨೩ ೨೪ರಿಂದ "ಹಸಿರಸಿರಿ " ಎಂಬ ೧೦,೦೦೦ ಗಿಡಗಳನ್ನು ನೆಡುವ ದೃಢಸಂಕಲ್ಪದ ಕಾರ್ಯಕ್ರಮ ಸಸ್ಯೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮುಂದುವರಿಸಿಕೊಂಡು ಬರುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಗಿಡಗಳನ್ನು ನೀಡಿ ಮಕ್ಕಳಲ್ಲಿ ಪ್ರಕೃತಿ ಬಗೆಗಿನ ಸಹಜ ಒಲವನ್ನು ಮೂಡಿಸಿ, ಪೋಷಕರ ಜವಾಬ್ದಾರಿಯುತ ಪರಿಸರ ಸಂರಕ್ಷಣೆ ಕನಸಿಗೆ ನೀರೆಯುವ ಪ್ರಯತ್ನದಲ್ಲಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇದೀಗ ತೃತೀಯ ವರ್ಷದ ಸಂಕಲ್ಪಾಚರಣೆಯಲ್ಲಿ ನಾವೆಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಕೋರ್ಡಿನೇಟರ್ ಸುಧೀರ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಕಾರ್ಯದರ್ಶಿ ರವಿ ಕುಮಾರ್, ಖಜಾಂಚಿ ದಿಲೀಪ್ ಇತರರು ಉಪಸ್ಥಿತರಿದ್ದರು.