ಪ್ರಾಮಾಣಿಕ ರಾಜಕಾರಣಿಗೆ ನಿಗಮ ಸ್ಥಾನ ಸಿಕ್ಕಿದ್ದು ಸಂತಸ

| Published : Feb 12 2024, 01:32 AM IST

ಸಾರಾಂಶ

. ಇಂತಹ ಪ್ರಾಮಾಣಿಕ ರಾಜಕಾರಣಿಗೆ ನಿಗಮ ಸ್ಥಾನ ದೊರಕಿರುವುದು ಸಂತಸ ತಂದಿದೆ. ಇವರಿಂದ ಈ ಕ್ಷೇತ್ರವೂ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಇನ್ನಷ್ಟು ಸೌಲಭ್ಯಗಳು ದೊರೆಯಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ ಹಿರಿಯ ಮುತ್ಸದ್ದಿ ರಾಜಕಾರಣಿ, ಶಿಕ್ಷಣ ಪ್ರೇಮಿ, ನೇರ ನುಡಿಯ ಹೃದಯ ಸಿರಿವಂತಿಕೆಯುಳ್ಳ ಕಾಗವಾಡ ಶಾಸಕ ರಾಜು ಕಾಗೆಯವರು ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದುದಕ್ಕೆ ಸಂತಸ ತಂದಿದೆ ಎಂದು ಪ.ಪಂ ಸದಸ್ಯ ಹಾಗೂ ಐನಾಪುರ ಪದ್ಮಾವತಿ ವಿದ್ಯಾವರ್ದಕ ಸಂಸ್ಥೆಯ ಉಪಾದ್ಯಕ್ಷ ಸಂಜಯ ಕುಚನೂರೆ ಹೇಳಿದರು.

ಅವರು ಭಾನುವಾರ ಉಗಾರದ ಶಾಸಕರ ಗೃಹ ಕಚೇರಿಯಲ್ಲಿ ಐನಾಪುರ ಪದ್ಮಾವತಿ ವಿದ್ಯಾವರ್ದಕ ಸಂಸ್ಥೆಯ ವತಿಯಿಂದ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಾಸಕ ಕಾಗೆಯವರು ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಎಂದು ಬಿಡಲಾರರು ಎನ್ನುವುದಕ್ಕೆ ನಮ್ಮ ಸಂಸ್ಥೆಯನ್ನು ಅನುದಾನಕ್ಕೆ ಒಳಪಡಿಸಲು ಬಹಳಷ್ಟು ಶ್ರಮಿಸಿರುವುದು ಸಾಕ್ಷಿ. ಇಂತಹ ಪ್ರಾಮಾಣಿಕ ರಾಜಕಾರಣಿಗೆ ನಿಗಮ ಸ್ಥಾನ ದೊರಕಿರುವುದು ಸಂತಸ ತಂದಿದೆ. ಇವರಿಂದ ಈ ಕ್ಷೇತ್ರವೂ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಇನ್ನಷ್ಟು ಸೌಲಭ್ಯಗಳು ದೊರೆಯಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜು ಕಾಗೆ, ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಿರಿ, ನಿಮ್ಮೆಲ್ಲರ ಆಶೀರ್ವಾದದಿಂದ 5ನೇ ಬಾರಿಗೆ ಶಾಸಕನಾಗಿ ಈಗ ನಿಗಮದ ಅಧ್ಯಕ್ಷನಾಗಿದ್ದೇನೆ. ಅಧಿಕಾರ ಇರುವವರೆಗೆ ಕ್ಷೇತ್ರದ ಮತ್ತು ಈ ಭಾಗದ ಜನರ ಸೇವಕನಾಗಿ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಸಂಸ್ಥೆ ಅಧ್ಯಕ್ಷ ದಶರಥ ತೆರದಾಳೆ, ಕಾರ್ಯದರ್ಶಿ ಪ್ರಮೋದ ಲಿಂಬಿಕಾಯಿ, ವಸಂತ ಹುದ್ದಾರ ಸೇರಿದಂತೆ ಅನೇಕರು ರವಿವಾರ ಶಾಸಕರ ಕಚೇರಿಗೆ ಆಗಮಿಸಿ ಅವರಿಗೆ ಹೂಗುಚ್ಚ ನೀಡಿ ಮೈಸೂರು ಪೇಟ ಧರಿಸಿ ಸನ್ಮಾನಿಸಿದರು.