ಅಧಿಕಾರಿಗಳು ಮಾಹಿತಿ ನೀಡಿಲ್ಲವೆಂದು ಕುಂದುಕೊರತೆ ಪರಿಹಾರ ಸಭೆ ಮೊಟಕು

| Published : Aug 09 2025, 12:01 AM IST

ಅಧಿಕಾರಿಗಳು ಮಾಹಿತಿ ನೀಡಿಲ್ಲವೆಂದು ಕುಂದುಕೊರತೆ ಪರಿಹಾರ ಸಭೆ ಮೊಟಕು
Share this Article
  • FB
  • TW
  • Linkdin
  • Email

ಸಾರಾಂಶ

ಸಭೆ ಇರುವ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ವಿವಿಧ ಸಮುದಾಯಗಳ ಪ್ರಮುಖರು ಆರೋಪಿಸಿ ಸಭೆಯ ಆರಂಭದಲ್ಲಿಯೇ ಹೊರನಡೆದರು.

ಹಾನಗಲ್ಲ: ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸಂಬಂಧಿಸಿದಂತೆ ಕುಂದುಕೊರತೆಗಳ ಪರಿಹಾರದ ಸಭೆ ಮುಂದೂಡಿಕೆಯಾಯಿತು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರಮುಖರು ಸಭೆಯನ್ನು ಬಹಿಷ್ಕರಿಸಿದ್ದರಿಂದ ಅನಿವಾರ್ಯವಾಗಿ ಸಭೆ ಮೊಟುಕುಗೊಳಿಸಲಾಯಿತು.ಸಭೆ ಇರುವ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ವಿವಿಧ ಸಮುದಾಯಗಳ ಪ್ರಮುಖರು ಆರೋಪಿಸಿ ಸಭೆಯ ಆರಂಭದಲ್ಲಿಯೇ ಹೊರನಡೆದರು. ಕುಂದು ಕೊರತೆಗಳ ನಿವಾರಣೆಯ ಸಭೆ ಆಯೋಜಿಸುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹರಿಹಾಯ್ದರು. ಸಭೆಯ ನೇತೃತ್ವ ವಹಿಸಿದ್ದ ತಹಸೀಲ್ದಾರ್ ರೇಣುಕಾ ಎಸ್. ಅವರ ಮನವಿಗೂ ಸ್ಪಂದನೆ ಸಿಗಲಿಲ್ಲ.ಸಭೆಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ ಅವರ ಮನವೊಲಿಕೆ ಪ್ರಯತ್ನ ಕೂಡ ಕೈಗೂಡಲಿಲ್ಲ.ತಹಸೀಲ್ದಾರ್ ಕಚೇರಿ ಪ್ರವೇಶ ಧ್ವಾರದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಎಸ್‌ಸಿ, ಎಸ್‌ಟಿ ಪ್ರಮುಖರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಉಮೇಶ ದೊಡ್ಡಮನಿ, ಕಾಟಾಚಾರಕ್ಕಾಗಿ ಸಭೆ ಆಯೋಜನೆಗೊಂಡಿದೆ. ಪರಿಶಿಷ್ಟ ಜಾತಿ, ಪಂಗಡಗಳ ಸಾಕಷ್ಟು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿತ್ತು. ಆದರೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಭೆಗೆ ಆಹ್ವಾನಿಸಿ, ಈ ಸಮುದಾಯದ ಪ್ರಮುಖರನ್ನು ಸಭೆಯಿಂದ ಹೊರಗಿಡುವ ಉದ್ದೇಶ ಹೊಂದಲಾಗಿದೆ ಎಂದು ಆಪಾದಿಸಿದರು.ಪ್ರಮುಖರಾದ ಬಸವರಾಜ ಡುಮ್ಮಣ್ಣನವರ, ರಾಜಕುಮಾರ ಶಿರಪಂತಿ, ಶಿವಣ್ಣ ಮಾಸನಕಟ್ಟಿ, ಬಸವರಾಜ ಎಸ್‌ಟಿಡಿ, ಲಕ್ಷ್ಮಣ ಬಾರ್ಕಿ, ಮಂಜುನಾಥ ಕರ್ಜಗಿ, ದುರ್ಗಪ್ಪ ಹರಿಜನ, ವಸಂತ ವೆಂಕಟಾಪೂರ, ಪ್ರಭು ಬಾರ್ಕಿ, ಸಿದ್ಧಪ್ಪ ಹರವಿ, ಸಿದ್ಲಿಂಗಪ್ಪ ಲಕ್ಮಾಪೂರ, ಮಂಜು ಹರಿಜನ, ಜಗದೀಶ ಹರಿಜನ, ಮಾರುತಿ ಹಂಜಗಿ ಇದ್ದರು.ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದ್ದು, ಸಂಬಂಧಿಸಿದ ಸಮುದಾಯಗಳ ಪ್ರಮುಖರೊಂದಿಗೆ ಚರ್ಚಿಸಿ ಸಭೆಯ ಮುಂದಿನ ದಿನ ನಿಗದಿ ಮಾಡಲಾಗುತ್ತದೆ ಎಂದು ಅಧಿಕಾರಿ ಗಂಗಾ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.