ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಹೆಸರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಮನೆಯ ಮುಂದಿನ ಯಜಮಾನಿಯರು ಈ ಬಗ್ಗೆ ತಿಳಿಸಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್‌.ಎಂ.ಮಧು ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮನೆಯ ಮುಂದಿನ ಯಜಮಾನಿಯರು ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಫಲಾನುಭವಿ ವ್ಯಕ್ತಿಯ ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ. ಸರ್ಕಾರದ ಆದೇಶ/ಸುತ್ತೋಲೆ ಬಂದ ನಂತರ ಕ್ರಮ ವಹಿಸಬಹುದು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಜನವರಿ ಮಾಹೆವರೆಗೆ 107841 ಮಹಿಳೆಯರು ನೋಂದಣಿಯಾಗಿದ್ದು, 2044 ಫಲಾನುಭವಿಗಳು ಐಟಿ/ಜಿಎಸ್‌ಟಿ ಎಂದು ಪರಿಣಗಣಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲು 304 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಹಾಗೂ 42 ಫಲಾನುಭವಿಗಳಿಗೆ ಎನ್‌ಪಿಸಿಐ ಬಾಕಿ ಇದ್ದು ಪರಿಶೀಲಿಸಲಾಗುತ್ತಿದೆ. ಹಾಗೂ ನವೆಂಬರ್ ಮಾಹೆವರೆಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿವರೆಗೆ 54147 ಬಿಪಿಎಲ್ ಪಡಿತರ ಚೀಟಿದಾರರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. 5 ವರ್ಷದಿಂದ ಇಕೆವೈಸಿ ಮಾಡಿಸದೇ ಇರುವ ಪಡಿತರದಾರರು ಇಕೆವೈಸಿ ಮಾಡಿಸಿ ಪಡಿತರ ಪಡೆಯಬೇಕು. ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿರುವ ಪಡಿತರದಾರರು ನಿಗದಿತ ದಾಖಲೆಗಳಾದ 2 ರಿಂದ 3 ವರ್ಷಗಳ ಐಟಿ ರಿಟರ್ನ್ಸ್ ದಾಖಲೆ, ಪಡಿತರ ಚೀಟಿ ಜೆರಾಕ್ಸ್, ಆದಾಯ ಪ್ರಮಾಣ ಪತ್ರಗಳನ್ನು ನೀಡಿ ಮರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.


ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರು, ತಾಲೂಕು ಇಒ ಪರಮೇಶ್, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.