ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಮಹಿಳಾ ಸಬಲೀಕರಣಕ್ಕೆ ಮಹತ್ವದ ಹಾದಿಯನ್ನು ತೆರೆದಿರುವ ಹಲವಾರು ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಒಂದಾಗಿದೆ. ಕುಟುಂಬದ ಆರ್ಥಿಕ ಭದ್ರತೆ, ಗೃಹಿಣಿಯ ಸ್ವಾವಲಂಬಿ ಬದುಕಿಗೆ ಇಂಧನ ನೀಡುವ ಈ ಯೋಜನೆ, ಕರುನಾಡಿನ ನಾರಿಯರಿಗೆ ಆರ್ಥಿಕ ಬಲ ನೀಡುವ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ.ನಾಡಿನ ಮಹಿಳೆಯರ ಕನಸುಗಳನ್ನು ಸಾಕಾರಗೊಳಿಸಲು ಅಡಿಗಲ್ಲಾಗಿ ಗೃಹಲಕ್ಷ್ಮೀ ಯೋಜನೆ ನಿಂತಿದೆ. ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಶೇ.98.02ರಷ್ಟು ಸಾಧನೆ ಮಾಡಿದ್ದು, ಇದುವರೆಗೆ ₹835 ಕೋಟಿ ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 2,53,646 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವವರನ್ನು ಹೊರತುಪಡಿಸಿ, ಪಡಿತರ ಚೀಟಿಗಳಲ್ಲಿ 2,48,632 ಜನರನ್ನು ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿ ಶೇ.98.02 ಸಾಧನೆ ಮಾಡಲಾಗಿದೆ.
ಈ ಮಹತ್ತರ ಸಾಧನೆಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಮುತುವರ್ಜಿ ಹಾಗೂ ಮಾರ್ಗದರ್ಶನವೇ ಕಾರಣ. ಗೃಹಲಕ್ಷ್ಮೀ ಯೋಜನೆಗೆ ಒಟ್ಟು 5014 ಅನರ್ಹರಾಗಿರುವವರಲ್ಲಿ 2,707 ಆದಾಯ ತೆರಿಗೆದಾರರು ಮತ್ತು ಜಿ.ಎಸ್.ಟಿ ಪಾವತಿದಾರರು, 926 ಮಂದಿ ಮರಣ ಹೊಂದಿರುವವವರು, 1381 ನಿಷ್ಕ್ರೀಯಗೊಂಡ ಪಡಿತರ ಚೀಟಿಗಳು ಒಳಗೊಂಡಿವೆ.ಯೋಜನೆಯಡಿ ಗದಗ ತಾಲೂಕಿನಲ್ಲಿ 80,363 ಫಲಾನುಭವಿಗಳನ್ನು, ಗಜೇಂದ್ರಗಡದಲ್ಲಿ 27,102, ಲಕ್ಷ್ಮೇಶ್ವರದಲ್ಲಿ 26,773, ಮುಂಡರಗಿಯಲ್ಲಿ 35,198, ನರಗುಂದದಲ್ಲಿ 23,938, ರೋಣದಲ್ಲಿ 36,857, ಶಿರಹಟ್ಟಿಯಲ್ಲಿ 23,415 ಫಲಾನುಭವಿಗಳನ್ನು ನೋಂದಾಯಿಸಲಾಗಿದೆ.
ಗೃಹಲಕ್ಷ್ಮೀಯಿಂದ ಬಂದ ಭಾಗೀರಥಿ: ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣ ಕೂಡಿಟ್ಟು ಗಜೇಂದ್ರಗಡ ಪಟ್ಟಣದ ನಿವಾಸಿಯಾದ ಮಾಬುಬ್ಬಿ ಮಾಲ್ದಾರ ಹಾಗೂ ಅವರ ಸೊಸೆ ರೋಷನ್‌ಬೇಗಂ ಮಾಲ್ದಾರ ತಮ್ಮ ಜಮೀನಿನಲ್ಲಿ ಬೋರವೆಲ್ ಕೊರೆಯಿಸಿ, ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ತಿಂಗಳು ಬಂದ ₹2000 ಹಣ ಕೂಡಿಟ್ಟು ತಮ್ಮ ಮೂರು ಎಕರೆ ಜಮೀನಿನಲ್ಲಿ ₹60 ಸಾವಿರ ಖರ್ಚು ಮಾಡಿ, ಬೋರವೆಲ್ ಕೊರೆಯಿಸಿ ಸ್ವಾವಲಂಭಿ ಜೀವನ ನಡೆಸಲು ಮುಂದಾಗಿದ್ದು, ಸುಮಾರು 1.5 ಇಂಚು ನೀರು ದೊರೆತಿದೆ. ಅತ್ತೆ-ಸೊಸೆಯ ಕೃಷಿ ಕನಸಿಗೆ ಶಕ್ತಿ ದೊರೆತಂತಾಗಿದೆ. ಕೃಷಿ ಕುಟುಂಬದಿಂದ ಬಂದಿರುವ ಮಾಬುಬ್ಬಿ ಮಾಲ್ದಾರ ಅವರು ವ್ಯವಸಾಯವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ.ಇಂತಹ ಹಲವಾರು ನಿದರ್ಶನಗಳು ಗದಗ ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿವೆ.
ಗೃಹ ಲಕ್ಷ್ಮೀ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಬಲ ನೀಡುವ ಮಹತ್ವದ ಹೆಜ್ಜೆಯಾಗಿದ್ದು, ಇದು ಕೇವಲ ಹಣದ ನೆರವಲ್ಲ, ಗೌರವ ಮತ್ತು ಆತ್ಮವಿಶ್ವಾಸವನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಗೃಹಿಣಿಯ ಶ್ರಮವನ್ನು ಗುರುತಿಸುವ ಈ ಯೋಜನೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿರ್ಧಿಷ್ಟ ಸಮಯದಲ್ಲಿ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ ಹೇಳಿದರು.