ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಿಲ್ಲ. ಸದನದಲ್ಲಿ ಪ್ರಶ್ನಿಸಿದಾಗ ಮೊದಲಿಗೆ ಸುಳ್ಳು ಮಾಹಿತಿ ನೀಡಿ ಜಾರಿಕೊಳ್ಳುವ ಪ್ರಯತ್ನ ನಡೆಯಿತು. ದಾಖಲೆ ಸಮೇತ ಬಹಿರಂಗ ಪಡಿಸಿದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಗಿರುವ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೂಡ ಕೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಹಣ ಜಮೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಹೀಗೆ ಭರವಸೆ ನೀಡಿ 20 ದಿನಗಳಾದರೂ ಹಣ ಜಮೆಯಾಗಿಲ್ಲ.

ಹುಬ್ಬಳ್ಳಿ:

ಗೃಹಲಕ್ಷ್ಮೀ ಹಣ ಹಂಚಿಕೆಯಲ್ಲಿ ಆಗಿರುವ ತಪ್ಪನ್ನು ಸದನದಲ್ಲೇ ಒಪ್ಪಿಕೊಂಡಿದ್ದ ಸರ್ಕಾರ ತಕ್ಷಣವೇ ಹಣ ಹಾಕುವುದಾಗಿ ತಿಳಿಸಿತ್ತು. ಆದರೆ 20 ದಿನಗಳಾದರೂ ಈ ವರೆಗೂ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎಂದು ಕಿಡಿಕಾರಿದ ಶಾಸಕ ಮಹೇಶ ಟೆಂಗಿನಕಾಯಿ, ಈ ವಿಷಯವಾಗಿ ಬಿಜೆಪಿ ತನ್ನ ಹೋರಾಟ ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಿಲ್ಲ. ಸದನದಲ್ಲಿ ಪ್ರಶ್ನಿಸಿದಾಗ ಮೊದಲಿಗೆ ಸುಳ್ಳು ಮಾಹಿತಿ ನೀಡಿ ಜಾರಿಕೊಳ್ಳುವ ಪ್ರಯತ್ನ ನಡೆಯಿತು. ದಾಖಲೆ ಸಮೇತ ಬಹಿರಂಗ ಪಡಿಸಿದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಗಿರುವ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೂಡ ಕೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಹಣ ಜಮೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಹೀಗೆ ಭರವಸೆ ನೀಡಿ 20 ದಿನಗಳಾದರೂ ಹಣ ಜಮೆಯಾಗಿಲ್ಲ ಎಂದು ಕಿಡಿಕಾರಿದರು.ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಡುವೆ ತಿಕ್ಕಾಟ ನಡೆದಿದೆಯೋ ಅಥವಾ ಸರ್ಕಾರದ ಬಳಿ ದುಡ್ಡು ಇಲ್ಲವೇ? ಎಂದು ಪ್ರಶ್ನಿಸಿದ ಅವರು, 5 ಸಾವಿರ ಕೋಟಿ ಎಲ್ಲಿ ಹೋಯಿತು ಎಂಬ ಪ್ರಶ್ನೆ ಕಾಡುತ್ತಿದೆ. ತಕ್ಷಣವೇ ಮಹಿಳೆಯರ ಖಾತೆಗೆ ಜಮೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ನಿಲ್ಲದು. ಖಾತೆಗೆ ಹಣ ಜಮೆಯಾಗುವ ವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಡಿಸಿದರು.

ಗೃಹಲಕ್ಷ್ಮೀ ಯೋಜನೆ ಕುರಿತಂತೆ ಬರೀ ತಪ್ಪು ಮಾಹಿತಿಯನ್ನೇ ನೀಡಿದ್ದಾರೆ. ತಾವು ಕೇಳಿದಾಗ 23 ಕಂತು ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹಾಸನ ಶಾಸಕ ಸ್ವರೂಪ ಪ್ರಕಾಶ ಅವರು ಕೇಳಿದ್ದಕ್ಕೆ 21 ಕಂತು ಜಮೆಯಾಗಿದೆ ಎಂದು ಉತ್ತರ ನೀಡಿದ್ದು ಬಹಿರಂಗಗೊಂಡಿದೆ. ಒಂದೇ ಅಧಿವೇಶನದಲ್ಲಿ 2 ಬಗೆಯ ಉತ್ತರ ನೀಡಲು ಹೇಗೆ ಸಾಧ್ಯವೆಂದ ಅವರು, ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಬೇಡಿ ಎಂದು ಮೌಖಿಕ ಆದೇಶ ನೀಡಿದ್ದಾರೆ. ಹೀಗಾಗಿ ಅಧಿಕಾರಿ ವರ್ಗ ತಮ್ಮ ಪೋನ್‌ನ್ನು ಪಿಕ್‌ ಮಾಡುತ್ತಿಲ್ಲ ಎಂದು ಆರೋಪಿಸಿದರು. ಏನೇ ಆಗಲೇ ತಕ್ಷಣವೇ ಮಹಿಳೆಯರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ವಾಯವ್ಯ ಸಾರಿಗೆ:

ಇನ್ನೂ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬಿಡುಗಡೆಯಾಗಬೇಕಿದ್ದ ₹ 980 ಕೋಟಿ ಸರ್ಕಾರ ಬಿಡುಗಡೆ ಮಾಡುತ್ತಲೇ ಇಲ್ಲ. ಮಹಿಳೆಯರಿಗೆ ಉಚಿತವಾಗಿ ಓಡಾಡಲು ಅವಕಾಶ ನೀಡಿದ್ದು ಉತ್ತಮ. ಆದರೆ, ವೆಚ್ಚವಾಗಿರುವ ದುಡ್ಡನ್ನು ಸಂಸ್ಥೆಗೆ ಕೊಡದೇ ಇದ್ದರೆ ಹೇಗೆ? ಸಂಸ್ಥೆಯನ್ನು ಮುಚ್ಚುವ ಹುನ್ನಾರ ಅಡಗಿದೆಯೇ? ಎಂದು ಪ್ರಶ್ನಿಸಿದರು.

ಇನ್ನು ನಿರ್ವಾಹಕ ಕಂ ಚಾಲಕ ಹುದ್ದೆಗೆ ಅರ್ಹರಾಗಿರುವ 1814 ಜನ ಅಭ್ಯರ್ಥಿಗಳ ಪೈಕಿ 1000 ಜನರನ್ನು ವಾಯವ್ಯ ಸಾರಿಗೆ ಸಂಸ್ಥೆಗೆ ತೆಗೆದುಕೊಳ್ಳುತ್ತಿದೆ. ಇನ್ನುಳಿದ 814 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಚಿವರನ್ನು ಶೀಘ್ರದಲ್ಲೇ ಭೇಟಿಯಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಚಂದ್ರಮೌಳೇಶ್ವರ ಕಾರಿಡಾರ್‌:

ಉಣಕಲ್‌ನ ಚಂದ್ರಮೌಳೇಶ್ವರ ಕಾರಿಡಾರ್‌ ನಿರ್ಮಿಸಲು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಅನುಮತಿ ಸಿಕ್ಕಿದೆ. ₹ 25 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಇದರಲ್ಲಿ ₹ 17 ಕೋಟಿ ಸುತ್ತಮುತ್ತಲು ವಾಸವಾಗಿರುವ ಜನತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಕ್ಕೆ ಹಾಗೂ ₹ 7 ಕೋಟಿ ಕಾರಿಡಾರ್‌ ನಿರ್ಮಾಣಕ್ಕೆ ಬೇಕು. ಈ ಬಜೆಟ್‌ನಲ್ಲಿ ಈ ಹಣ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಶೀಘ್ರದಲ್ಲೇ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಲಿಂಗರಾಜ ಪಾಟೀಲ. ರಾಜು ಕಾಳೆ, ವಸಂತ, ರವಿ ನಾಯ್ಕ ಸೇರಿದಂತೆ ಹಲವರಿದ್ದರು.