ಸಾರಾಂಶ
ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗೃಹಲಕ್ಷ್ಮೀ ಯೋಜನೆಯ 1 ತಿಂಗಳ ಹಣ ₹ 2000 ಅನ್ನು ತಾಲೂಕಿನ ಹಿರೇಬೀಡನಾಳ ಗ್ರಾಮದ ಮಹಿಳೆಯರು ಗ್ರಾಮದ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.
ಕುಕನೂರು ತಾಲೂಕಿನ ಹಿರೇಬೀಡನಾಳ ಗ್ರಾಮದ ಮಹಿಳೆಯರಿಂದ ಮಾದರಿ ಕಾರ್ಯ
ಅಮರೇಶ್ವರಸ್ವಾಮಿ ಕಂದಗಲ್ಲಮಠಕನ್ನಡಪ್ರಭ ವಾರ್ತೆ ಕುಕನೂರು
ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗೃಹಲಕ್ಷ್ಮೀ ಯೋಜನೆಯ 1 ತಿಂಗಳ ಹಣ ₹ 2000 ಅನ್ನು ತಾಲೂಕಿನ ಹಿರೇಬೀಡನಾಳ ಗ್ರಾಮದ ಮಹಿಳೆಯರು ಗ್ರಾಮದ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.ಗ್ರಾಮದಲ್ಲಿ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡಬೇಕು ಎಂಬುದು ಗ್ರಾಮದ ಹಿರಿಯರ, ಭಕ್ತಾದಿಗಳ ಸಂಕಲ್ಪವಾಗಿತ್ತು. ಅದರಂತೆ ಗ್ರಾಮದ ಹಿರಿಯರು, ಯುವಕರು, ಭಕ್ತರು ಸೇರಿ ಗ್ರಾಮದಲ್ಲಿ ಈ ಬಾರಿ ಶರಣ ಬಸವೇಶ್ವರ ದೇವಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಬೇಕು ಎಂಬ ನಿರ್ಣಯ ತೆಗೆದುಕೊಂಡಾಗ, ಗೃಹಲಕ್ಷ್ಮಿ ಫಲಾನುಭವಿಗಳಾದ ಗ್ರಾಮದ ಎಲ್ಲ ಮಹಿಳೆಯರು ಶರಣಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಒಂದು ತಿಂಗಳ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಈಗಾಗಲೇ ಸುಮಾರು 50 ಜನ ಮಹಿಳೆಯರು ತಲಾ ₹2000 ನೀಡಿದ್ದಾರೆ.
ಗ್ರಾಮದ ಎಲ್ಲ ಗೃಹಲಕ್ಷ್ಮಿ ಫಲಾನುಭವಿಗಳು ಒಂದು ತಿಂಗಳ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಎಲ್ಲ ಮಹಿಳೆಯರು ತಮ್ಮ ಖಾತೆಗೆ ಜಮಾ ಆದ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ನೀಡುತ್ತಿದ್ದಾರೆ.ಗ್ರಾಮದ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮದ ಎಲ್ಲ ಮಹಿಳೆಯರು ತಮ್ಮ ಖಾತೆಗೆ ಜಮಾ ಆದ ಒಂದು ತಿಂಗಳ ₹2000 ಗೃಹಲಕ್ಷ್ಮಿ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ನೀಡುತ್ತಿರುವುದು ನಿಜಕ್ಕೂ ಮಾದರಿ ಎನ್ನುತ್ತಾರೆ ಜಿಪಂ ಮಾಜಿ ಸದಸ್ಯ ಅಶೋಕ ತೋಟದ.
ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆಯ ಒಂದು ತಿಂಗಳ ಹಣವನ್ನು ದೇಣಿಗೆ ನೀಡುತ್ತಿದ್ದೇವೆ. ಸರ್ಕಾರ ನಮಗೆ ಪ್ರತೀ ತಿಂಗಳು ₹2000 ಹಣ ನೀಡುತ್ತಿರುವುದು ಕುಟುಂಬದ ಆರ್ಥಿಕ ಸುಧಾರಣೆಗೆ ಬಲ ಬಂದಿದೆ. ಹಾಗೆ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮದ ಮಹಿಳೆಯರು ನಾವು ಸಾಥ್ ನೀಡುತ್ತಿದ್ದೇವೆ ಎನ್ನುತ್ತಾರೆ ಹಿರೇಬೀಡಿನಾಳ ಗ್ರಾಮದ ಮಹಿಳೆಯರಾದ ದಾಕ್ಷಾಯಣಮ್ಮ, ನೀಲಮ್ಮ.