ಸಾರಾಂಶ
ಬೆಳಗಾವಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಬೆಳಗಾವಿಯ ಬಡ ಮಹಿಳೆಯೊಬ್ಬರು ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಯೋಜನೆ ವೃದ್ಧೆಯ ಪತಿ ಬಾಳಿಗೆ ಬೆಳಕು ತಂದಿದೆ.
ನಗರದ ಅನಗೋಳದ ನಿವಾಸಿ ಚಂದ್ರಶೇಖರ ಬಡಿಗೇರ (61) ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾದವರು. ಬಡಕುಟುಂಬವಾಗಿದ್ದರಿಂದ ಶಸ್ತ್ರಚಿಕಿತ್ಸೆ ಮುಂದೂಡತ್ತಾ ಬಂದಿದ್ದರು. ಆದರೆ, ಮನೆ ಒಡತಿಗೆ ಪ್ರತಿ ತಿಂಗಳು ₹2000 ನೀಡುವ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮೀ ಯೋಜನೆಯಿಂದ 9 ತಿಂಗಳ ಹಣವನ್ನು ಕೂಡಿಟ್ಟ ಪತ್ನಿ ಅನಿತಾ ಯೋಜನೆಯಿಂದ ಬಂದ ₹18 ಸಾವಿರ ಮತ್ತು ತನ್ನ ಬಳಿಯಿದ್ದ ₹10 ಸಾವಿರ ಸೇರಿಸಿ ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅನಿತಾ ಅವರು ಭಾಗ್ಯಲಕ್ಷ್ಮೀ ಯೋಜನೆ ತನಗೆ ಸಹಕಾರಿ ಆದ ಬಗ್ಗೆ ವಿಡಿಯೋ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಧನ್ಯವಾದ ತಿಳಿಸಿದ್ದು, ಸಾಮಾಜಿಕ ತಾಣದಲ್ಲಿ ಈಗ ವಿಡಿಯೋ ವೈರಲ್ ಆಗಿದೆ.
ಸವಾಲಾಗಿದ್ದ ನೇತ್ರಚಿಕಿತ್ಸೆ:
ದೃಷ್ಟಿದೋಷದಿಂದ ಬಳಲುತ್ತಿದ್ದ ಪತಿ ಚಂದ್ರಶೇಖರ ಅವರನ್ನು ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದರು. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಾಗಿತ್ತು. ಬೆಳಗಾವಿಯ ನಂದಾದೀಪ ನೇತ್ರಾಲಯದಲ್ಲಿ ಜೂ.13 ರಂದು ಮಾಡಲಾದ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಇದರಿಂದಾಗಿ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಅನಿತಾ ಬಡಿಗೇರ ಸಂತಸ ವ್ಯಕ್ತಪಡಿಸಿದರು.