ಸಾರಾಂಶ
ಜಮಖಂಡಿ : ವಿಧಿಯಾಟದ ಮುಂದೆ ಎಲ್ಲವೂ ಗೌಣ. ಮದುವೆ ಸಂಭ್ರಮ ತುಂಬಿಕೊಂಡಿದ್ದ ಕಲ್ಯಾಣ ಮಂಟಪದಲ್ಲಿ ಅರೆಗಳಿಗೆಯಲ್ಲಿ ಸೂತಕದ ಛಾಯೆ ಆವರಿಸಿತ್ತು.
ವರ ವಧುವಿಗೆ ತಾಳಿ ಕಟ್ಟಿದ 20 ನಿಮಿಷದಲ್ಲೇ ತೀವ್ರ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಶುಕ್ರವಾರ ನಡೆದಿದೆ. ಕುಂಬಾರಹಳ್ಳ ಗ್ರಾಮದ ಪ್ರವೀಣ ಶ್ರೀಶೈಲ ಕುರಣಿ ಮೃತಪಟ್ಟ ಮದುಮಗ.
ಆಗಿದ್ದೇನು?: ರಾಜ್ಯ ಸೈಕ್ಲಿಂಗ್ ಅಸೋಸಿಯೇಶನ್ ಕಾರ್ಯದರ್ಶಿಯೂ ಆಗಿರುವ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಶ್ರೀಶೈಲ ಕುರಣಿ ಅವರ ಪುತ್ರನ ವಿವಾಹ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಮುಹೂರ್ತದಂತೆ ನಿಗದಿತ ಸಮಯಕ್ಕೆ ವರ ವಧುವಿನ ಕೊರಳಿಗೆ ತಾಳಿ ಕಟ್ಟಿದ್ದು, ಬಳಿಕ ನೂತನ ದಂಪತಿ ಸ್ನೇಹಿತರು, ಬಂಧುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಪ್ರವೀಣ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ.
ನೋಡನೋಡುತ್ತಿಂದತೆಯೇ ಪ್ರವೀಣ ಕುಸಿದು ಬಿದ್ದಿದ್ದಾನೆ.ಆಗ ಗಾಬರಿಗೊಂಡ ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮದುವೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರಸಂಗ ಬಂದಿದ್ದು ವಿಧಿಯಾಟ. ಖಾಸಗಿ ಕಂಪನಿಯಲ್ಲಿ ಪ್ರವೀಣ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಹಿಂದು ರುದ್ರಭೂಮಿಯಲ್ಲಿ ಪ್ರವೀಣ ಅಂತ್ಯಕ್ರಿಯೆ ನಡೆಯಿತು.