ಕೊಪ್ಪಳ: ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹೋರಾಟದಿಂದ ಎಚ್ಚೆತ್ತು ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಸ್ವಾಗತರ್ಹವಾದರೂ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಘೋರ ಅನ್ಯಾಯ ಮಾಡಲು ಮುಂದಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದ್ದಾರೆ.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೇಮಕ ಮಾಡಿಕೊಳ್ಳುವ ಹೇಳಿಕೆ ನೀಡುವ ಮುನ್ನ ಶೇ.56 ರಷ್ಟು ಮೀಸಲಾತಿಯ ಕುರಿತು ಮಾತನಾಡಿದೆ, ಈಗ ಏಕಾಏಕಿ ಶೇ.50 ರಷ್ಟು ಮೀಸಲಾತಿಯನುಸಾರ ನೇಮಕ ಮಾಡಿಕೊಳ್ಳುವುದಾಗಿ ಹೇಳಿರುವುದು ಭಾರಿ ಅನ್ಯಾಯ ಮಾಡಿದಂತಾಗಿದೆ ಎಂದಿದ್ದಾರೆ.ರಾಜ್ಯ ಸರ್ಕಾರ ೫೬೪೩೨ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.ಆದರೆ ಪ್ರಕ್ರಿಯೆ ಶೇ.೫೬ ರ ಮೀಸಲಾತಿ ಹೊರಗಿಟ್ಟು ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಎಸ್ಸಿ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ರಚಿಸುವಾಗ ಶೇ. ೫೬ ಮೀಸಲಾತಿಯೇ ಇದೆ. ಸರ್ಕಾರ ಒಳ ಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ.೫೬ ಮೀಸಲಾತಿ ಇದ್ದಿದ್ದು, ಈಗ ಏಕಾಏಕಿ ಶೇ.೫೦ ಕ್ಕೆ ಇಳಿಸಿರುವುದು ಪರಿಶಿಷ್ಟರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ಪರದಾಡುತ್ತಿದೆ. ಸಾರಿಗೆ, ಆರೋಗ್ಯ ಇಲಾಖೆಯ ನೌಕರರಿಗೆ ಪಾವತಿಸಬೇಕಾದ ಸಂಬಳದಲ್ಲಿ ನೂರಾರು ಕೋಟಿ ಬಾಕಿ ಇದೆ. ಅದ್ಯಾವುದನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ. ಆರ್ಥಿಕವಾಗಿ ದೀವಾಳಿಯಾಗಿರುವ ರಾಜ್ಯ ಸರ್ಕಾರ ಈಗ ಇಂಥ ತಪ್ಪು ಮಾಡುವ ಮೂಲಕ ಮತ್ತಷ್ಟು ಅನ್ಯಾಯ ಮಾಡುತ್ತಿದೆ. ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ,ವಿದ್ಯಾರ್ಥಿಗಳ ಕನಸು ನುಚ್ಚುನೂರು ಮಾಡುತ್ತಿದೆ ಎಂದು ಆರೋಪಿಸಿದರು.ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಂಖ್ಯೆಗಳಿಗೆ ಅನುಗುಣವಾಗಿ ಕೊಡಬೇಕಾದ ಮೀಸಲಾತಿಗೆ ಸಾಂವಿಧಾನಿಕವಾದ ಮಾನ್ಯತೆ ಇದೆ.ಇದನ್ನು ಸಮರ್ಥವಾಗಿ ಹೈಕೋರ್ಟ್‌ನಲ್ಲಿ ಮಂಡಿಸುವಲ್ಲಿ ಸೋತಿರುವ ಸರ್ಕಾರ ನೇಮಕಾತಿಯ ವೇಳೆಯಲ್ಲಿ ಮೀಸಲಾತಿ ಕಡಿತ ಮಾಡಿ ಅನ್ಯಾಯ ಮಾಡುತ್ತಿದೆ.ಇದನ್ನು ಬಿಜೆಪಿ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ಹೋರಾಟ ಮಾಡುವುದಾಗಿಯೂ ಅವರು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ್ ಬಿಲ್ಗಾರ್, ಮುಖಂಡ ಹನುಮೇಶ ನಾಡಿಗೇರ್, ವಿಜಯ ತಾಳಕೇರಿ, ಗಣೇಶ ಹೊರತಟ್ನಾಳ ಇತರರು ಇದ್ದರು.