ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಯ ರಭಸಕ್ಕೆ ಪಟ್ಟಣದ ಸಮೀಪದ ಇಂಗಳಗಿ ಕೆರೆ ಹತ್ತಿರ ರೈತರು ಬೆಳೆದ ಕಬ್ಬು, ದಾಳಿಂಬೆ ಬೆಳೆಗಳು ಹಾನಿಗೊಳಗಾಗಿವೆ. ಪಟ್ಟಣ ಸೇರಿದಂತೆ ತಾಲೂಕಿನ ಪಡಗಾನೂರ, ಮುಳಸಾವಳಗಿ, ಹರನಾಳ, ನಿವಾಳಖೇಡ, ಇಂಗಳಗಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಆವಾಂತರ ಸೃಷ್ಟಿಯಾಗಿವೆ.ಪಡಗಾನೂರ ಗ್ರಾಮದ ಅಂಬಣ್ಣ ಬಾಸಲಗಾವಿ, ಇಂಗಳಗಿ ಕೆರೆ ಹತ್ತಿರದ ನಾನಗೌಡ ಗುರಬಸಪ್ಪ ಬಿರಾದಾರ ಅವರ ತೋಟದಲ್ಲಿ ಕಬ್ಬಿನ ಬೆಳೆ ಹಾಗೂ ರಾಮು ದೇಸಾಯಿ ಎಂಬುವರಿಗೆ ಸೇರಿದ ಕಬ್ಬು ಹಾಗೂ 2.5ಎಕರೆ ವಿಸ್ತೀರ್ಣದಲ್ಲಿ ಬೆಳೆದಿರುವ ದಾಳಿಂಬೆ, ಪೇರಲ ಹಣ್ಣು, ತೋಟಗಾರಿಕೆ ಬೆಳೆ ಹಾಗೂ ಕಬ್ಬು, ಮೆಕ್ಕೆಜೋಳ ಸುತ್ತಮುತ್ತಲಿನ ಜಮೀನುಗಳಲ್ಲಿನ ಬೆಳೆಗಳು ಹಾನಿಗೊಳಗಾಗಿವೆ. ಫಲಭರಿತ ದಾಳಿಂಬೆ ಗಿಡಗಳು ಭಾರೀ ಗಾಳಿ ಮಳೆಗೆ ತುತ್ತಾಗಿದ್ದು, ಭಾಗಶಃ ಹಾನಿಯಾಗಿದೆ. 2.5 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದು, ತೋಟದಲ್ಲಿನ ಸುಮಾರು 800 ಗಿಡಗಳಲ್ಲಿ ಫಲ ತುಂಬಿ ನಿಂತಿದ್ದವು. ಕಾಯಿ ಕೀಳಲು ಬಿಸಿಲಿಗೆ ಬಣ್ಣ ಬರಲಿ ಎಂದು ಕಾದು ಕುಳಿತಿದ್ದ ರೈತ ರಾಮು ದೇಸಾಯಿ ಅವರಿಗೆ ಈ ಮಳೆ ಸಂಕಷ್ಟ ತಂದೊಡ್ಡಿದೆ.
ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ, ಕಬ್ಬು ಹಾಗೂ ಮೆಕ್ಕೆಜೋಳ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಸಿಕ್ಕು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಸಾಲ ಮಾಡಿ ಭೀಕರ ಬಿರು ಬಿಸಿಲಿನಲ್ಲಿಯೂ ದಾಳಿಂಬೆ, ಕಬ್ಬು ಬೆಳೆಗಳ ಜೋಪಾನ ಮಾಡಿ ಇನ್ನೇನು ಎರಡು-ಮೂರು ತಿಂಗಳಲ್ಲಿ ಫಸಲು ಕೈಗೆ ಬರುವ ನಿರೀಕ್ಷೆ ಇತ್ತು. ರೈತನಿಗೆ ವರುಣನಿಂದ ಈಗ ಬರಸಿಡಿಲು ಬಡಿದಂತಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.ಅಧಿಕಾರಿಗಳ ಭೇಟಿ, ಪರಿಶೀಲನೆ:ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ವರದಿ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ,ರೈತರಿಗೆ ಧೈರ್ಯ ತುಂಬಿದರು.
ಜಿಲ್ಲಾ ತೋಟಗಾರಿಕಾ ಅಧಿಕಾರಿಗಳಾದ ರಾಹುಲಕುಮಾರ ಬಾವಿದೊಡ್ಡಿ, ಅಧಿಕಾರಿಗಳಾದ ಎಸ್.ಎಸ್.ಪಾಟೀಲ, ಎಚ್.ವೈ.ಸಿಂಗೆಗೂಳ, ಅಕ್ಷತಾ ಹೊಂಗಳೆ, ಎಚ್.ಕೆ.ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಭೀಮನಗೌಡ ಬಿರಾದಾರ, ಅನಿಲ್ ರಾಠೋಡ, ಮುಖಂಡರಾದ ಬಸನಗೌಡ ಬಿರಾದಾರ, ಕಾಸುಗೌಡ ಜಿರ್ಲಿ, ಅಜೀಜ್ ಯಲಗಾರ, ರಾಚೋಟಯ್ಯ ಹಿರೇಮಠ, ವೀರೇಶ ಕುದುರಿ, ಉಮೇಶ ಕೊಟಿನ್, ಅರವಿಂದ ರಾಠೋಡ ಸೇರಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ತೋಟದ ರೈತರು ಉಪಸ್ಥಿತರಿದ್ದರು.------ಕೋಟ್‌ಮಳೆಯಿಂದ ಈಗ ಏಕಾಏಕಿ ಉಂಟಾಗಿರುವ ಹಾನಿಯಿಂದಾಗಿ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಿಕೊಡಬೇಕು. ಇಗ ಸಿಗುತ್ತಿರುವ ಪರಿಹಾರವನ್ನು ಸರ್ಕಾರ ಕೂಡಲೇ ಮರು ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು.ಶಂಕರಗೌಡ ಹಿರೇಗೌಡರ. ರೈತ ಸಂಘದ ಜಿಲ್ಲಾಧ್ಯಕ್ಷ------ಕೋಟ್‌ಇಡೀ ಕುಟುಂಬದವರು ಕೃಷಿಯಲ್ಲೇ ತೊಡಗಿದ್ದೇವೆ. ದಾಳಿಂಬೆ, ಕಬ್ಬು ಹಾಗೂ ಮೆಕ್ಕೆಜೋಳ, ಪೇರಲ ಸೇರಿದಂತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ದಾಳಿಂಬೆ ಹಾಗೂ ಕಬ್ಬು ಬೆಳೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಿದ್ದೇವು. ಭಾರಿ ಮಳೆಗೆ ಫಸಲು ನೆಲಕಚ್ಚಿದ್ದು ಮನಸ್ಸಿಗೆ ನೋವುಂಟು ಮಾಡಿದೆ. ರಾಮು ದೇಸಾಯಿ, ಕೃಷಿಕ ದೇವರಹಿಪ್ಪರಗಿ