ಅರಣ್ಯ ಇಲಾಖೆ ಸಿಬ್ಬಂದಿಗಳು ಕೇವಲ ಕಾನೂನು ಪಾಲನೆಯ ಜೊತೆಗೆ, ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಹಾಗೂ ವಿಶ್ವಾಸದ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಅರಣ್ಯ ಇಲಾಖೆ ಮತ್ತು ಜನರ ನಡುವೆ ಉತ್ತಮ ಹೊಂದಾಣಿಕೆ ಇದ್ದರೆ ಮಾತ್ರ ಅರಣ್ಯ ಸಂರಕ್ಷಣೆ ಪರಿಣಾಮಕಾರಿಯಾಗಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯದ ಮೇಲೆ ಅವಲಂಬಿತವಾಗಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವ ಅರಣ್ಯ ಸಿಬ್ಬಂದಿಯಲ್ಲಿ ಇರಬೇಕು ಎಂದು ತಿಳಿಸಿದರು.
ಕನ್ನಡ ಪ್ರಭ ವಾರ್ತೆ ಸಕಲೇಶಪುರ
ಅರಣ್ಯ ಇಲಾಖೆ ಸಿಬ್ಬಂದಿಗಳು ಕೇವಲ ಕಾನೂನು ಪಾಲನೆಯ ಜೊತೆಗೆ, ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಹಾಗೂ ವಿಶ್ವಾಸದ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಯಸಳೂರು ಪ್ರಾದೇಶಿಕ ವಲಯದಲ್ಲಿ ₹40 ಲಕ್ಷ ವೆಚ್ಚದಲ್ಲಿ ಮುಂಚೂಣಿ ಅರಣ್ಯ ಸಿಬ್ಬಂದಿಯ ವಸತಿಗೃಹ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸರ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಮಹತ್ವದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮುಂದಿನ ಪೀಳಿಗೆಗೆ ಅರಣ್ಯವನ್ನು ಉಳಿಸುವ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದ್ದು, ಅರಣ್ಯ ಇಲಾಖೆ ಮತ್ತು ಜನರ ನಡುವೆ ಉತ್ತಮ ಹೊಂದಾಣಿಕೆ ಇದ್ದರೆ ಮಾತ್ರ ಅರಣ್ಯ ಸಂರಕ್ಷಣೆ ಪರಿಣಾಮಕಾರಿಯಾಗಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯದ ಮೇಲೆ ಅವಲಂಬಿತವಾಗಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವ ಅರಣ್ಯ ಸಿಬ್ಬಂದಿಯಲ್ಲಿ ಇರಬೇಕು ಎಂದು ತಿಳಿಸಿದರು.ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸುವುದು, ಅವರ ಅಹವಾಲುಗಳನ್ನು ಸಹಾನುಭೂತಿಯಿಂದ ಆಲಿಸುವುದು ಹಾಗೂ ಸಮಸ್ಯೆಗಳಿಗೆ ಸಾಧ್ಯವಾದಷ್ಟು ತ್ವರಿತ ಪರಿಹಾರ ಒದಗಿಸುವುದರಿಂದ ಇಲಾಖೆಯ ಮೇಲಿನ ವಿಶ್ವಾಸ ಮತ್ತಷ್ಟು ಬಲವಾಗುತ್ತದೆ. ಅರಣ್ಯ ರಕ್ಷಣೆಯ ಜೊತೆಗೆ ಮಾನವೀಯತೆಯೂ ಅಷ್ಟೇ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆಯಂತಹ ಕಠಿಣ ಮತ್ತು ಅಪಾಯಕರ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ರಾಜ್ಯ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕರು ಒತ್ತಾಯಿಸಿದರು.