ಐತಿಹಾಸಿಕ ಹಿನ್ನೆಲೆಯ ಗುಜ್ಜನಡು ಶ್ರೀ ವೀರಾಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ನೂತನ ದೇವಾಲಯದ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ 21ರಂದು ನಡೆಯಲಿದೆ.

ಕನ್ನಡಪ್ರಭವಾರ್ತೆ ಪಾವಗಡ

ಐತಿಹಾಸಿಕ ಹಿನ್ನೆಲೆಯ ಗುಜ್ಜನಡು ಶ್ರೀ ವೀರಾಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ನೂತನ ದೇವಾಲಯದ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ 21ರಂದು ನಡೆಯಲಿದೆ. ಬೆಳಿಗ್ಗೆ 11.40ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲೂಕಿನ ಗುಜ್ಜನಡು,ಸಿ.ಎಚ್‌.ಪಾಳ್ಯ ಎ.ಎಚ್‌.ಪಾಳ್ಯ,ಸಿ.ಆರ್‌.ಪಾಳ್ಯ ಈ ನಾಲ್ಕು ಗ್ರಾಮಗಳ ಗ್ರಾಮಸ್ಥರು ಹಾಗೂ ದೇವಾಲಯ ಆಡಳಿತ ಮಂಡಳಿಯ ಸದಸ್ಯರು ಸಜ್ಜಾಗಿದ್ದಾರೆ.ತಾಲೂಕಿನ ಶ್ರೀ ಕ್ಷೇತ್ರ ಗುಜ್ಜನಡು ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಮತ್ತು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವರು ನೆಲೆಗೊಂಡಿದ್ದಾರೆ. ಬೆಂಗಳೂರು ತುಮಕೂರು ಹಾಗೂ ಇತರೆ ನಗರ ಪ್ರದೇಶ ಹಾಗೂ ವಿದೇಶಗಳಲ್ಲಿ ಅಪಾರ ಸಂಖ್ಯೆಯ ಭಕ್ತರಿದ್ದು,ಪ್ರತಿ ವರ್ಷ ಈ ದೇವಸ್ಥಾನಗಳಿಗೆ ಆಗಮಿಸಿ ನಮಿಸುತ್ತಿದ್ದಾರೆ. ದೇವಸ್ಥಾನ ಹಳೆಯದಾಗಿದ್ದರಿಂದ ಹಾಗೂ ಭಕ್ತರು ಸಂಖ್ಯೆಯೂ ಹೆಚ್ಚಾಗಿದ್ದರಿಂದ ಅವರಿಗೆ ಉತ್ತಮ ರೀತಿಯಲ್ಲಿ ಸೌಕರ್ಯಗಳನ್ನು ಪೂರೈಸಲು ಅದೇ ಸ್ಥಳದಲ್ಲಿ ಹೊಸ ದೇವಸ್ಥಾನ ನಿರ್ಮಾಣ ಮಾಡಲು ನಿರ್ಧರಿಸಿ ಸುಮಾರು 15 ಕೋಟಿ ವೆಚ್ಚದ ನೀಲ ನಕ್ಷೆ ಸಿದ್ಧ ಪಡಿಸಿಕೊಂಡಿದ್ದು 21ರಂದು ಬೆಳಿಗ್ಗೆ 11.40ರಿಂದ 12.20ರೊಳಗೆ ಸಲ್ಲುವ ಮೇಷ ಲಗ್ನದಲ್ಲಿ ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದೆ.

ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ದೀಪಾರಾದನೆ, ಮಾಹಾಸಂಕಲ್ಪ ಭಗವದ್ ವಾಸುದೇವ ಪುಣ್ಯಾಹಃ, ವಾಸ್ತು - ರಾಕ್ಷೋಘ್ನ ಹೋಮಗಳು, ಪರಿವಾರ ದೇವತೆಗೆಳ ಆರಾಧನೆ, ಪ್ರಧಾನ ಶ್ರೀಭೂ-ವರಾಹ ದೇವರ ಆರಾಧನೆ, ಅಗ್ನಿಪ್ರತಿಷ್ಠೆ-ಶ್ರೀ ವಿಶ್ವಕ್ಷೇನ- ಮಹಾಗಣಪತಿ ಹೋಮ, ಪಂಚ ಸೂಕ್ತಾದಿ ಹೋಮ, ವಾಸ್ತು ಪರಿವಾರ ಹೋಮ ಪ್ರಧಾನ ಶ್ರೀಭೂ -ವರಾಹ ದೇವರ ಹೋಮ, ಅಷ್ಟದಿಕ್ಪಾಲಕ ಹೋಮ, ಪ್ರಾಯಶ್ಚಿತ್ತ, ಶಾಂತಿ ಹೋಮ, ಪೂರ್ಣಾಹುತಿ ನಡೆದು ನಂತರ ಪ್ರಸಾದ ವಿನಿಯೋಗವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಮನವಿ ಮಾಡಿದ್ದಾರೆ.