ಹಾವೇರಿ: ಇಲ್ಲಿಯ ವಿದ್ಯಾನಗರದಲ್ಲಿರುವ ಜಿಲ್ಲಾ ಪತ್ರಿಕಾ ಭವನದ 2ನೇ ಹಂತ ಹಾಗೂ ನವೀಕರಣ ಕಾಮಗಾರಿಗೆ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹಾಗೂ ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಅವರು ಜಂಟಿಯಾಗಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.ಬಳಿಕ ಸರಳ ಸಮಾರಂಭದಲ್ಲಿ ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಮಾತನಾಡಿ, ಬಹಳ ಸಂತೋಷದಿಂದ ಪತ್ರಿಕಾ ಭವನದ ಎರಡನೇ ಹಂತದ ನವೀಕರಣ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇವೆ. ಈಗಾಗಲೇ ಪತ್ರಿಕಾ ಭವನದ ನವೀಕರಣಕ್ಕೆ 15 ಲಕ್ಷ ರು. ಅನುದಾನ ಕೊಟ್ಟಿದ್ದು, ಅವಶ್ಯ ಬಿದ್ದರೆ ಮತ್ತಷ್ಟು ಅನುದಾನ ನೀಡುತ್ತೇನೆ ಎಂದರು.ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ. ಪತ್ರಕರ್ತರಿಗೆ ಶಕ್ತಿ ಕೊಡದೆ ಇದ್ದರೆ ಸಮಾಜಕ್ಕೆ ಶಕ್ತಿ ಕೊಡಲು ಹೇಗೆ ಸಾಧ್ಯ. ಸಮಾಜದಲ್ಲಿ ಪತ್ರಕರ್ತರ ಮೇಲೆ ಬಹಳ ಜವಾಬ್ದಾರಿ ಇದೆ. ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತೀರಿ. ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡುತ್ತೀರಿ. ಕಾಮಗಾರಿ ಕೆಲಸವನ್ನು ಬೇಗನೇ ಆರಂಭಿಸಿ ಮಾಡಿ, ನಿಮಗೆ ಸಹಾಯ ಸಹಕಾರ ಮಾಡುತ್ತೇವೆ. ಪತ್ರಕರ್ತರ ಜತೆಗೆ ಯಾವಾಗಲೂ ಇರುತ್ತೇವೆ. ಹೈಟೆಕ್ ಪ್ರೆಸ್ ಕ್ಲಬ್ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿ. ಕಂಪ್ಯೂಟರ್ ವ್ಯವಸ್ಥೆ, ಎಸಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ವಿಪ ಸದಸ್ಯ ಸಲೀಂ ಅಹ್ಮದ್ ಅವರು ಮುಕ್ತ ಮನಸ್ಸಿನಿಂದ ಯಾರು ಏನೇ ಕೇಳಿದರೂ ತಮ್ಮ ಅನುದಾನ ಕೊಡುತ್ತಾ ಬಂದಿದ್ದಾರೆ. ಹದಿನೈದು ವರ್ಷಗಳಿಂದ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದಾರೆ. ಪತ್ರಕರ್ತರಿಗೆ ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲು ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಸರ್ಕಾರ ಎಷ್ಟು ಅನುದಾನ ಕೊಡುತ್ತದೆಯೋ ನೋಡೋಣ. ಉಳಿದಂತೆ ನಾನು ನನ್ನ ಅನುದಾನದ ಜತೆಗೆ ಬೇರೆಬೇರೆ ಎಂಎಲ್ಸಿಗಳ ಜತೆಗೆ ಚರ್ಚಿಸಿ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಮಾತನಾಡಿ, ಪತ್ರಿಕಾ ಭವನದ ಎದುರಿಗೆ ಒತ್ತುವರಿಯಾಗಿದ್ದ ನಗರಸಭೆಯ 1.5ಗುಂಟೆ ಜಾಗೆಯನ್ನು ಇತ್ತೀಚೆಗೆ ನಗರಸಭೆ ಪೌರಾಯುಕ್ತರು ತೆರವುಗೊಳಿಸಿಕೊಟ್ಟಿದ್ದಾರೆ. ಇದರಿಂದ ನಮಗೆ ಪಾರ್ಕಿಂಗ್‌ಗೆ ಅನುಕೂಲ ಆಗಲಿದೆ. ಪತ್ರಿಕಾ ಭವನದ ನವೀಕರಣಕ್ಕೆ ಉಭಯ ಶಾಸಕರು ಮತ್ತಷ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಶಿವಕುಮಾರ ತಾವರಗಿ, ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರು ಹಾಗೂ ಪದಾಧಿಕಾರಿಗಳು ಇದ್ದರು.