ಸಾರಾಂಶ
ಮುಖ್ಯ ಅತಿಥಿಯಾಗಿದ್ದ ಕೈಗಾ ಅಣು ವಿದ್ಯುತ್ ಯೋಜನೆಯ ಸ್ಥಳ ನಿರ್ದೇಶಕ ಬಿ. ವಿನೋದ ಕುಮಾರ, ನಮ್ಮ ಆರೋಗ್ಯ ಕಾಪಾಡುವಲ್ಲಿ ಶುಚಿತ್ವದ ಪಾತ್ರ ವಿವರಿಸಿದರು.
ಕಾರವಾರ: ಎನ್ ಪಿ ಸಿ ಐಎಲ್, ಕೈಗಾ ನೈಟ್, ನಿಗಮ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಯೋಜನೆಯಡಿಯಲ್ಲಿ ಜೋಯಿಡಾ ತಾಲೂಕಿನ ಉಳವಿ ಗ್ರಾಮದಲ್ಲಿ ಸ್ನಾನ ಹಾಗೂ ಶೌಚಾಲಯ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿತು.
ಮುಖ್ಯ ಅತಿಥಿಯಾಗಿದ್ದ ಕೈಗಾ ಅಣು ವಿದ್ಯುತ್ ಯೋಜನೆಯ ಸ್ಥಳ ನಿರ್ದೇಶಕ ಬಿ. ವಿನೋದ ಕುಮಾರ, ನಮ್ಮ ಆರೋಗ್ಯ ಕಾಪಾಡುವಲ್ಲಿ ಶುಚಿತ್ವದ ಪಾತ್ರ ವಿವರಿಸಿದರು. ಉಳವಿ ಕ್ಷೇತ್ರದಲ್ಲಿ ಪ್ರತಿನಿತ್ಯ ಬಹುಸಂಖ್ಯೆಯಲ್ಲಿ ಯಾತ್ರಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಭೇಟಿ ನೀಡುತ್ತಾರೆ. ಅಲ್ಲದೆ ಶ್ರಾವಣ, ಕಾರ್ತಿಕ್ ಮಾಸ ಹಾಗೂ ಜಾತ್ರಾ ರಥೋತ್ಸವದ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಈ ಕ್ಷೇತ್ರ ಭೇಟಿ ನೀಡುವ ಭಕ್ತರ ಹಾಗೂ ಊರ ನಾಗರಿಕರ ಆರೋಗ್ಯ ಗಮನದಲ್ಲಿಟ್ಟು ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಈ ಕಾಮಗಾರಿ ಮುಂದಿನ ಜಾತ್ರಾ ಸಮಯದವರೆಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆದೇಶಿಸಿದರು.
ಸಿಎನ್‌ಆರ್ ಅಧ್ಯಕ್ಷ ಎಸ್.ಜೆ.ತಿಪ್ಪೇಸ್ವಾಮಿ ಕಾಮಗಾರಿಯ ನೀಲನಕ್ಷೆ ಹಾಗೂ ಪೂರ್ಣ ವಿವರ ಸಭೆಯಲ್ಲಿ ನೀಡಿದರು.ಎನ್‌ಪಿಸಿಐಎಲ್ ಕೈಗಾ ಸಿಎಸ್‌ಆರ್ ಆರೋಗ್ಯ ಹಾಗೂ ಶುಚಿತ್ವ ವಿಭಾಗದಲ್ಲಿ ನಿರ್ಮಿಸಲಿರುವ ಈ ಕಟ್ಟಡದ ನೆಲ ಅಂತಸ್ತಿನಲ್ಲಿ ಮಹಿಳೆಯರಿಗಾಗಿ ಮತ್ತು ಮೊದಲನೇ ಅಂತಸ್ತಿನಲ್ಲಿ ಪುರುಷರಿಗಾಗಿ ಸ್ನಾನ ಹಾಗೂ ಶೌಚಾಲಯ ಒಳಗೊಂಡಿದೆ.
ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ್ ಮೂಕಾಶಿ ಸ್ವಾಗತಿಸಿ, ಈ ಕಾಮಗಾರಿ ಪೂರ್ಣಗೊಳಿಸಲು ತಮ್ಮ ಗ್ರಾಮ ಪಂಚಾಯತಿಯ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಎನ್‌ಪಿಸಿಐಎಲ್ ಕೈಗಾದಿಂದ ಎಂಜಿನಿಯರ್ ಸಾಹಿನಾಥ್ ಜಿ.ನಾಯ್ಕ, ನೌಕರರ ಸಂಘದ ಅಧ್ಯಕ್ಷ ಜಗದೀಶ ಗುನಗಾ ಪಾಲ್ಗೊಂಡಿದ್ದರು.
ಉಳವಿ ಗ್ರಾಪಂ, ಉಪಾಧಕ್ಷರು, ವಾರ್ಡ್ ಸದಸ್ಯರು, ಉಳವಿ ಚನ್ನಬಸವೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಊರ ನಾಗರಿಕರು ಭಾಗವಹಿಸಿದ್ದರು.ಉಳವಿ ಗ್ರಾಪಂ, ಪಿಡಿಓ ಯೋಗಿತಾ ದೇಸಾಯಿ ವಂದಿಸಿದರು.