ಅಡಕೆಗೆ ಕೊಳೆ ರೋಗ: ಗರಿಷ್ಠ ಪ್ರಮಾಣದ ಪರಿಹಾರಕ್ಕೆ ಆಗ್ರಹ

| Published : Aug 17 2024, 12:46 AM IST

ಅಡಕೆಗೆ ಕೊಳೆ ರೋಗ: ಗರಿಷ್ಠ ಪ್ರಮಾಣದ ಪರಿಹಾರಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಮಾಯಿಸಿದ ನೂರಾರು ರೈತರ ಪ್ರತಿನಿಧಿಗಳು ಅಡಕೆ ಕೊಳೆ ರೋಗಕ್ಕೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಶಿರಸಿ: ಜಿಲ್ಲೆಯ ರೈತರ ಜೀವನಾಡಿ ಅಡಕೆ ಬೆಳೆಗೆ ಅತಿವೃಷ್ಟಿಯಿಂದ ತೀವ್ರ ಕೊಳೆ ರೋಗ ತಗುಲಿ ಬಹಳಷ್ಟು ಹಾನಿಯಾಗಿದೆ. ಗರಿಷ್ಠ ಪ್ರಮಾಣದಲ್ಲಿ ಬೆಳೆ ಪರಿಹಾರ ಹಾಗೂ ಮೈಲುತುತ್ತಕ್ಕೆ ಸಹಾಯಧನ ನೀಡುವಂತೆ ಆಗ್ರಹಿಸಿ, ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದ ರೈತರ ಪ್ರತಿನಿಧಿಗಳು ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಮಾಯಿಸಿದ ನೂರಾರು ರೈತರ ಪ್ರತಿನಿಧಿಗಳು ಅಡಕೆ ಕೊಳೆ ರೋಗಕ್ಕೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಪ್ರಾಕೃತಿಕ ವಿಕೋಪ, ಜನ-ಜಾನುವಾರು ನಷ್ಟ, ಬೆಳೆ ನಷ್ಟದಿಂದ ರೈತರು ಕಂಗೆಟ್ಟಿದ್ದು, ಜಿಲ್ಲೆಯ ಬೆಳೆಗಳಲ್ಲಿ ಪ್ರಮುಖ ಬಹುತೇಕ ರೈತರ ಜೀವನಾಡಿ ಅಡಕೆ ಹಾಗೂ ಕಾಳುಮೆಣಸು ಬೆಳೆಗೆ ತೀವ್ರ ಹಾನಿ ಸಂಭವಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ವಾಡಿಕೆಗಿಂತ ಮಳೆ ದುಪ್ಪಟ್ಟಾಗಿದೆ. ಬೆಳೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಔಷಧಿ ಸಿಂಪಡಣೆಗೆ ಮುಂದಾದರೂ ತೀವ್ರ ಮಳೆಯ ಕಾರಣದಿಂದ ಸಿಂಪಡಿಸಿದ ಔಷಧಿಯಿಂದ ಪರಿಣಾಮ ಬೀರಿಲ್ಲ. ಅಬ್ಬರದ ಗಾಳಿಯ ಕಾರಣದಿಂದ ಕೊಳೆ ರೋಗ ಮತ್ತಷ್ಟು ವೇಗವಾಗಿ ವ್ಯಾಪಿಸಿದ್ದರಿಂದ ಅಡಕೆ ಬೆಳೆಗೆ ಹಿಂದೆಂದೂ ಕಂಡುಕೇಳರಿಯದ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ವರ್ಷದಲ್ಲಿ ಶೇ. ೪೦ರಿಂದ ಶೇ. ೭೦ರಷ್ಟು ಬೆಳೆಯು ಕೊಳೆ ರೋಗದಲ್ಲಿ ನಷ್ಟವಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ಅಡಕೆ ಮರಗಳಿಗೆ ಹಾನಿಯಾಗಿದ್ದು, ಎಲೆಚುಕ್ಕಿ ರೋಗ ಭಾದೆಯಿಂದ ಅಡಕೆಯ ಮರಗಳು ದೊಡ್ಡ ಪ್ರಮಾಣದಲ್ಲಿ ಈಗಾಗಲೇ ಸಾವನ್ನಪ್ಪಿವೆ. ಕೊಳೆ ರೋಗದ ನೇರ ಪರಿಣಾಮ ಅಡಕೆಯ ಮರಗಳ ಮೇಲಾಗುವುದರಿಂದ ಮರಗಳು ಸಾವನ್ನಪ್ಪುವ ಸಂಭವವಿದೆ. ಕೊಳೆ ರೋಗದಿಂದಾಗಿಯೂ ಅಡಕೆ ಮರಗಳು ಸಾವನ್ನಪ್ಪಿದಲ್ಲಿ ರೈತರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಅಡಕೆ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಅಡಕೆ ಕೊಳೆ ರೋಗ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ರೈತರ ಪರವಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಿಷ್ಠ ಪ್ರಮಾಣದಲ್ಲಿ ಬೆಳೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮನವಿ ಸ್ವೀಕರಿಸಿ, ಘಟ್ಟದ ಮೇಲಿನ ತಾಲೂಕಿನ ರೈತರ ಜೀವನಾಡಿ ಅಡಕೆ ಬೆಳೆಗೆ ಕೊಳೆ ರೋಗ ತಗುಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ರೈತರ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮನವಿ ಸಲ್ಲಿಸುವ ವೇಳೆ ಟಿ.ಎಂ.ಎಸ್. ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಟಿ.ಎಸ್.ಎಸ್. ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ, ಟಿಆರ್‌ಸಿ ನಿರ್ದೇಶಕ ಲೋಕೇಶ ಹೆಗಡೆ ಹುಲೇಮಳಗಿ, ಪ್ರಮುಖರಾದ ಶಿವಾನಂದ ಕಳವೆ, ರವಿ ಹೆಗಡೆ ಹಳದೋಟ, ಜಲಜಾಲಕ್ಷಿ ಹೆಗಡೆ, ಆರ್.ವಿ. ಹೆಗಡೆ ಚಿಪಗಿ, ಜಿ.ವಿ. ಜೋಶಿ ಕಾಗೇರಿ, ಆರ್.ಡಿ. ಹೆಗಡೆ ಜಾನ್ಮನೆ, ಮಹೇಂದ್ರ ಹೆಗಡೆ, ಜಿ.ಆರ್. ಭಟ್ಟ ಹೆಬ್ಬಲಸು ಸೇರಿದಂತೆ ಸೇವಾ ಸಹಕಾರಿ ಸಂಘಗಳ ಪ್ರತಿನಿಧಿಗಳು, ಅಡಕೆ ಬೆಳೆಗಾರರು ಇದ್ದರು.

ಮೈಲುತುತ್ತಕ್ಕೆ ಸಹಾಯಧನ ನೀಡಲಿ

ರೈತರ ಕಷ್ಟಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಹೋಬಳಿವಾರು ಅಡಕೆ ಬೆಳೆ ಸಮೀಕ್ಷೆ ನಡೆಸಲು ಆದೇಶಿಸಬೇಕು. ಹವಾಮಾನ ಆಧರಿತ ಬೆಳೆ ವಿಮೆಯು ಅಡಕೆ ಕೊಳೆ ರೋಗಕ್ಕೆ ಲಾಗೂ ಆಗುವುದಿಲ್ಲ. ಕೊಳೆ ರೋಗದಿಂದ ಹಾನಿಗೊಳಗಾದ ಅಡಕೆ, ಕಾಳುಮೆಣಸು ಬೆಳೆಯ ಸ್ಥಿತಿಗತಿಯ ಬಗ್ಗೆ ವಸ್ತುನಿಷ್ಠ ವರದಿ ಪಡೆದು ಈ ಪ್ರದೇಶವನ್ನು ಕೊಳೆ ರೋಗ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಅಡಕೆ, ಕಾಳುಮೆಣಸು ಬೆಳೆಗೆ ಕೊಳೆಯ ಪರಿಹಾರ ರೂಪವಾಗಿ ಪರಿಹಾರ ಧನ ಹಾಗೂ ಔಷಧಿ ಸಿಂಪಡಣೆಗೆ ಅಗತ್ಯವಿರುವ ಮೈಲುತುತ್ತಕ್ಕೆ ಸಹಾಯಧನ ನೀಡಬೇಕೆಂದು ರೈತರ ಪರವಾಗಿ ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಟಿ.ಎಂ.ಎಸ್ ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.