ಅಡಕೆ ಬೆಳೆಗಾರರಿಗೆ ಬಿಜೆಪಿಯಿಂದ ಮೋಸ: ರಮೇಶ್ ಹೆಗ್ಡೆ

| Published : Apr 15 2024, 01:20 AM IST / Updated: Apr 15 2024, 01:09 PM IST

ಸಾರಾಂಶ

ಜಯಪ್ರಕಾಶ್‌ ಹೆಗ್ಡೆ ಅವರಂತಹ ರೈತರ ಕಾಳಜಿಯ ಸಂಸದರಿಂದ ಅಡಕೆಗೆ ಇಂದು ಉತ್ತಮ ಬೆಲೆ ಸಿಗಲು ಕಾರಣವಾಯಿತು. ಈ ಬಗ್ಗೆ ಸವಾಲೆಸೆಯುವವರು ಯಾರಾದರೂ ಇದ್ದರೆ ಮುಕ್ತ ಚರ್ಚೆಗೆ ಬರಬಹುದು ಎಂದು ರಮೇಶ್‌ ಹೆಗ್ಡೆ ಸವಾಲು ಹಾಕಿದರು.

 ಅಜ್ಜಂಪುರ :  ಅಡಕೆ ತಿಂದರೆ ಕ್ಯಾನ್ಸರ್‌ ಬರುತ್ತದೆ ಎಂದು ವರದಿ ನೀಡಿ ಅಡಕೆ ಬೆಳೆಗಾರರ ಬದುಕಿಗೆ ವಿಷವನ್ನುಣಿಸಿದ್ದು ಬಿಜೆಪಿ ಸರ್ಕಾರ. ಹಿಂದೆ ಜಯಪ್ರಕಾಶ್‌ ಹೆಗ್ಡೆ ಅವರಂತಹ ರೈತರ ಕಾಳಜಿಯ ಸಂಸದರಿಂದ ಅಡಕೆಗೆ ಇಂದು ಉತ್ತಮ ಬೆಲೆ ಸಿಗಲು ಕಾರಣವಾಯಿತು. ಈ ಬಗ್ಗೆ ಸವಾಲೆಸೆಯುವವರು ಯಾರಾದರೂ ಇದ್ದರೆ ಮುಕ್ತ ಚರ್ಚೆಗೆ ಬರಬಹುದು. ಕ್ವಿಂಟಾಲ್‌ಗೆ 10 ಸಾವಿರವಿದ್ದ ಅಡಕೆ ಬೆಲೆ ಇಂದು 50ರ ಗಡಿ ದಾಟಿದೆ ಎಂದು ಶಿವಮೊಗ್ಗ ಜಿಲ್ಲಾ ಅಡಕೆ ಬೆಳೆಗಾರರ ಸಂಘ ಅಧ್ಯಕ್ಷ ರಮೇಶ್‌ ಹೆಗ್ಡೆ ಹೇಳಿದರು.

ಅವರು ಭಾನುವಾರ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಶ್ಯಾನುಭೊಗರ ಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತನಾಡಿದರು.

ಜಯಪ್ರಕಾಶ್‌ ಹೆಗ್ಡೆ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಅಡಕೆ ಬೆಳೆಗಾರರು ಇಂದು ಜೆಪಿ ಹೆಗ್ಡೆ ಅವರ ಕಾರ್ಯಸಾಧನೆಯನ್ನು ಮೆಚ್ಚುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ, ಅಡಕೆ ಬೆಳೆಗಾರರಿಗೆ ನ್ಯಾಯ ದೊರಕಿಸಿರುವ ಬಗ್ಗೆ ತೃಪ್ತಿ ಇದೆ. ಈ ಬಗ್ಗೆ ದಾಖಲೆಗಳೇ ಹೇಳುತ್ತಿವೆ. ಅಡಕೆ ತಿಂದರೆ ಕ್ಯಾನ್ಸರ್‌ ಬರುತ್ತದೆ ಎಂಬ ಸುಳ್ಳು ಸುದ್ದಿ ಹರಡಿದವರು ಯಾರೆಂಬು ಎಲ್ಲರಿಗೂ ತಿಳಿದಿದೆ. ಈ ಭಾಗದ ಜನರು ತೋರುತ್ತಿರುವ ಪ್ರೀತಿ, ಅವರಲ್ಲಿರುವ ಆತ್ಮವಿಶ್ವಾಸ ಎಲ್ಲವನ್ನೂ ಹೇಳುತ್ತಿದೆ ಎಂದು ಹೇಳಿದರು.

ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಉಚಿತ ಯೋಜನೆಗಳು ರಾಜ್ಯದ ಬಡವರಿಗೆ ನೆರವಾಗಿದೆ. ಮತಯಾಚನೆ ಮಾಡುವಾಗ ಜನರು ಅದನ್ನು ಹೇಳುತ್ತಿದ್ದಾರೆ. ನಮಗೆ ಕಾಂಗ್ರೆಸ್‌ ಸರ್ಕಾರ ಸಜ್ಜನ ರಾಜಕಾರಣಿ ಜಯಪ್ರಕಾಶ್‌ ಹೆಗ್ಡೆ ಅವರನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ ಎಂದರು.