ಸಾರಾಂಶ
ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆಗಾಗಿ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಗ್ರಾಪಂ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಹಂತದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ನಿರ್ಮಿಸಬೇಕು ಎಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಹೇಳಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂ ಕಟ್ಟಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಸೂಚನೆ ನೀಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿರುವುದು, ತಾಪಮಾನ ಹೆಚ್ಚಳ, ಹವಾಮಾನ ವೈಪರೀತ್ಯದಿಂದಾಗಿ ಅಂತರ್ಜಲ ಮಟ್ಟ ಕುಗ್ಗಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆಗಾಗಿ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಗ್ರಾಪಂ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಹಂತದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ನಿರ್ಮಿಸಬೇಕು. ಕೊಳವೆ ಬಾವಿ ಮರುಪೂರಣ ಘಟಕ, ಕೆರೆ ಹೂಳೆತ್ತುವುದು, ಕಲ್ಯಾಣಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಜಲ ಮೂಲಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ನರೇಗಾದಲ್ಲಿ ಕಳೆದ ವರ್ಷ ಮಾನವ ಸೃಜನೆಯಲ್ಲಿ ಗುರಿ ಸಾಧಿಸಿದಂತೆ ಈ ವರ್ಷವೂ ಉತ್ತಮ ಕಾರ್ಯಸೂಚಿಯೊಂದಿಗೆ ಕಾರ್ಯಪ್ರವರ್ತರಾಗಬೇಕು ಎಂದು ಹೇಳಿದರು.ಕೂಲಿಕಾರರ ಭಾಗವಹಿಸುವಿಕೆ, ಮಾನವ ದಿನಗಳ ಸೃಜನೆ, ಕಾಮಗಾರಿ ಪೂರ್ಣಗೊಳಿಸುವಿಕೆ, ಮಳೆ ನೀರು ಕೊಯ್ಲು, ಎನ್‌ಎಂಎಂಎಸ್, ಜಿಯೋ ಟ್ಯಾಗ್, ಏರಿಯಾ ಆಫೀಸರ್ ವಿಸಿಟ್, ಆದ್ಯತೆಯ ಕಾಮಗಾರಿಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಮಾಲೋಚಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಜಿಪಂ ಅಧಿಕಾರಿಗಳು, ತಾಪಂ ನರೇಗಾ ಸಹಾಯಕ ನಿರ್ದೇಶಕರು ಇದ್ದರು.