ದೊಡ್ಡಕರಡೇವು ಗ್ರಾಮದ ಕೆರೆ ಭರ್ತಿಯಾದ ಮೇಲೆ ಹೆಚ್ಚುವರಿ ನೀರು ಮದಲಪುರ, ತಿಮ್ಲಾಪುರ, ಯಲಿಯೂರು, ಬರಗೂರು, ಗೆಜ್ಜಗಾರನಹಳ್ಳಿ, ಕತ್ತರಿಘಟ್ಟ ಗ್ರಾಮದ ಕೆರೆಗಳಿಗೆ ಹರಿಯುವ ಮೂಲಕ ಸಾಕಷ್ಟು ಕೃಷಿ ಭೂಮಿಯಲ್ಲಿ, ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ.
ಚನ್ನರಾಯಪಟ್ಟಣ: ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಿಂದ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳ ಅಂತರ್ಜಲ ವೃದ್ಧಿಯಾಗಿದೆ ಎಂದು ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಲ್.ಮಧು ತಿಳಿಸಿದರು.
ಅವರು ತಾಲೂಕಿನ ದಂಡಿಗನಹಳ್ಳಿ ಹೋಬಳಿ ದೊಡ್ಡಕರಡೇವು ಗ್ರಾಮದ ದೊಡ್ಡಕೆರೆ ಹಾಗೂ ಬೇರಿಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ, ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣನವರ ಶ್ರಮದಿಂದ ದಂಡಿಗನಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಯುತ್ತಿದೆ. ಇದರಿಂದ ಸಾವಿರಾರು ಮಂದಿ ರೈತರು ನೆಮ್ಮದಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.ಕಾಚೇನಹಳ್ಳಿ ಮೊದಲ ಹಂತದ ಏತ ನೀರಾವರಿಯಿಂದ ರಾಷ್ಟ್ರೀಯ ಹೆದ್ಧಾರಿ ದಾಟಲು ಆಗಲಿಲ್ಲ, ಎರಡನೇ ಹಂತದಿಂದ ಅಣ್ಣೇನಹಳ್ಳಿ, ಅಪ್ಪೇನಹಳ್ಳಿವರೆಗೆ ನೀರು ಹರಿದು ಇದೀಗ ದೊಡ್ಡ ಕರಡೇವು ಗ್ರಾಮದ ಕೆರೆ ಭರ್ತಿಯಾಗಿದೆ. ಈ ಮೂಲಕ ಮೂರನೇ ಹಂತದ ಏತ ನೀರಾವರಿ ಕಾಮಗಾರಿ ಮುಗಿದ ಮೇಲೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಸಾಕಷ್ಟು ಹಳ್ಳಿಗಳಿಗೂ ಇದರ ಲಾಭವಾಗುತ್ತದೆ. ಏತನೀರಾವರಿಗಳು ಬರಡು ಭೂಮಿಗೆ ಜೀವಜಲವಾಗಿವೆ, ಕೃಷಿ ಚಟುವಟಿಕೆ, ಹೈನುಗಾರಿಕೆ ಮಾಡುವುದರ ಜೊತೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಅನುಕೂಲ ಆಗುತ್ತಿವೆ ಎಂದು ತಿಳಿಸಿದರು.
ದೊಡ್ಡಕರಡೇವು ಗ್ರಾಮದ ಕೆರೆ ಭರ್ತಿಯಾದ ಮೇಲೆ ಹೆಚ್ಚುವರಿ ನೀರು ಮದಲಪುರ, ತಿಮ್ಲಾಪುರ, ಯಲಿಯೂರು, ಬರಗೂರು, ಗೆಜ್ಜಗಾರನಹಳ್ಳಿ, ಕತ್ತರಿಘಟ್ಟ ಗ್ರಾಮದ ಕೆರೆಗಳಿಗೆ ಹರಿಯುವ ಮೂಲಕ ಸಾಕಷ್ಟು ಕೃಷಿ ಭೂಮಿಯಲ್ಲಿ, ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಶಿವನಂಜಮ್ಮ, ನಂಜಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಸತೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವೀಶ್, ಕುಂದೂರು ಪಿಎಸಿಸಿಎಸ್ ಅಧ್ಯಕ್ಷ ಹರೀಶ್, ನಿರ್ದೇಶಕರಾದ ಜಯಲಕ್ಷ್ಮೀ, ಸತೀಶ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವೆಂಕಟರಮಣಸ್ವಾಮಿ, ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಮಂಜಣ್ಣ, ಮುಖಂಡರಾದ ದಿನೇಶ್, ನಾಗೇಂದ್ರ, ಪರಮೇಶ್, ವಿಕಾಸ್ ಮೊದಲಾದವರು ಉಪಸ್ಥಿತರಿದ್ದರು.