ಚಿಕ್ಕಬಾಸೂರಿನಲ್ಲಿ ಗುಂಪು ಘರ್ಷಣೆ, 10 ಜನರಿಗೆ ಗಾಯ

| Published : Feb 15 2025, 12:32 AM IST

ಸಾರಾಂಶ

ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಿನ ಸಿದ್ದರಾಮೇಶ್ವರ ದೇವಸ್ಥಾನ ಟ್ರಸ್ಟ್‌ ಪದಾಧಿಕಾರಿಗಳ ಆಯ್ಕೆ ವೇಳೆ ಸಮನ್ವಯ ಏರ್ಪಡದ ಹಿನ್ನೆಲೆಯಲ್ಲಿ ಗುರುವಾರ ತಡ ರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಗಾಯಗೊಂಡ 8-10 ಜನರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್‌ ಬಂದೋಬಸ್ತ್‌ ಆಯೋಜಿಸಲಾಗಿದೆ.

ಬ್ಯಾಡಗಿ: ತಾಲೂಕಿನ ಚಿಕ್ಕಬಾಸೂರಿನ ಸಿದ್ದರಾಮೇಶ್ವರ ದೇವಸ್ಥಾನ ಟ್ರಸ್ಟ್‌ ಪದಾಧಿಕಾರಿಗಳ ಆಯ್ಕೆ ವೇಳೆ ಸಮನ್ವಯ ಏರ್ಪಡದ ಹಿನ್ನೆಲೆಯಲ್ಲಿ ಗುರುವಾರ ತಡ ರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಗಾಯಗೊಂಡ 8-10 ಜನರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್‌ ಬಂದೋಬಸ್ತ್‌ ಆಯೋಜಿಸಲಾಗಿದೆ.

ಕಳೆದ ವರ್ಷವಷ್ಟೇ ಭಕ್ತರ ಸಹಕಾರದೊಂದಿಗೆ ಲಕ್ಷಾಂತರ ಜನರನ್ನು ಸೇರಿಸಿ ಸಿದ್ದರಾಮೇಶ್ವರ ಜಯಂತಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಈಗ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಸಿದ್ದರಾಮೇಶ್ವರ ದೇವಸ್ಥಾನ ನಿರ್ಮಾಣ ವಿಷಯವಾಗಿ ಸಮಿತಿ ಸದಸ್ಯರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.ಘಟನೆಯ ಹಿನ್ನೆಲೆ: ಸಿದ್ದರಾಮೇಶ್ವರ ದೇವಸ್ಥಾನ ಟ್ರಸ್ಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಸಮಿತಿಗಳನ್ನು ರಚಿಸಲಾಗಿತ್ತು. ಇದರಿಂದ ಆರಂಭಗೊಂಡ ಆಂತರಿಕ ಬೇಗುದಿಗಳು ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದಲ್ಲದೇ ದೇವಸ್ಥಾನ ನಿರ್ಮಾಣಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿತ್ತು, ದೇವಸ್ಥಾನಗಳು ಸರ್ವ ಸಮುದಾಯಕ್ಕೆ ಸೇರಿದ್ದು ಒಂದೇ ಸಮಯದಾಯಕ್ಕೆ ಸೀಮಿತಗೊಳಿಸಿ ಸಮಿತಿ ರಚಿಸೋದು ಬೇಡ, ಇದರಿಂದ ದೇವಸ್ಥಾನದ ಮೇಲಿರುವ ನಮ್ಮೆಲ್ಲರ ಭಕ್ತಿಗೆ ಧಕ್ಕೆಯಾಗಲಿದೆ. ಎಲ್ಲಾ ಸಮುದಾಯ ಜನರಿರುವ ಸಮಿತಿ ರಚಿಸೋಣವೆಂದು ಒಂದು ಗುಂಪು ವಾದಿಸಿದೆ. ಇದಕ್ಕೊಪ್ಪದ ಇನ್ನೊಂದು ಗುಂಪು ಸಿದ್ದರಾಮೇಶ್ವರ ದೇವಸ್ಥಾನ ನಮ್ಮ ಸಮುದಾಯಕ್ಕೆ ಸೇರಿದ್ದು, ನಾವೇ ಅದಕ್ಕೆ ಉತ್ತರಾಧಿಕಾರಿಗಳು ಎಂಬ ವಾದವನ್ನು ಮಂಡಿಸಿತು. ಇದರಿಂದ ಮಾತಿಗೆ ಮಾತು ಬೆಳೆದು ಘರ್ಷಣೆಗೆ ಕಾರಣವಾಗಿದೆ.ಯಥಾಸ್ಥಿತಿಗೆ ಕೋರ್ಟ ಆದೇಶ:ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಮೆಟ್ಟಿಲೇರಿ ಸಮಿತಿಯನ್ನು ಅವಮಾನಿಸಲಾಗಿದೆ ಎಂಬುದು ಈ ಗುಂಪು ಘರ್ಷಣೆಗೆ ಕಾರಣ ಎನ್ನಲಾಗುತ್ತಿದೆ. ಈ ಸಮಸ್ಯೆ ಕೆಲದಿನಗಳ ಹಿಂದಷ್ಟೇ ಪೊಲೀಸ್‌ ಠಾಣೆ ಮೆಟ್ಟಿಲನ್ನೇರಿತ್ತು. ಗ್ರಾಮದಲ್ಲಿ ಸೌಹಾರ್ದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ, ತಹಸೀಲ್ದಾರ ಫೀರೋಜ್‌ಷಾ ಸೋಮನಕಟ್ಟಿ, ಸಿಪಿಐ ಮಾಲತೇಶ ಲಂಬಿ ಸೇರಿದಂತೆ ಕೆಲ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಶಾಸಕರು ಮೊದಲಿದ್ದ ಸಮಿತಿಯಲ್ಲಿ ಹೊಸದಾಗಿ ಆರಂಭವಾದ ಎರಡೂ ಸಮಿತಿಗಳ ಪದಾಧಿಕಾರಿಗಳನ್ನು ಸೇರಿಕೊಂಡು ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಸಹಕರಿಸುವಂತೆ ಮನವಿ ಮಾಡಿದಾಗ್ಯೂ ಘರ್ಷಣೆಗಳು ನಡೆದಿದ್ದು, ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಘಟನೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ, ಯಾರನ್ನೂ ಕೂಡ ನಾವು ವಶಕ್ಕೆ ಪಡೆದಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುಮಾರು 30ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂದು ಸಿಪಿಐ ಮಹಾಂತೇಶ ಲಂಬಿ ಹೇಳಿದರು.