ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಅಶ್ವಗಂಧ ಒಂದು ಔಷಧೀಯ ಸಸ್ಯವಾಗಿದ್ದು ಇದರಿಂದ ಜನರಿಗೆ ಅನೇಕ ಉಪಯೋಗಗಳಿವೆ. ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಅಶ್ವಗಂಧ ಸಸ್ಯವನ್ನು ರೈತರು ಹೆಚ್ಚು ಬೆಳೆದು ತಾವೂ ಉಪಯೋಗಿಸಿ ಇದರಿಂದ ಆರೋಗ್ಯ ಮತ್ತು ಹಣ ಎರಡನ್ನೂ ಸಂಪಾದಿಸಬಹುದು ಎಂದು ಬೆಂಗಳೂರಿನ ಗಾರ್ಡನ್ ಸಿಟಿ ಯೂನಿವರ್ಸಿಟಿ ಲೈಫ್‌ಸೈನ್ಸ್ ಪ್ರೊಫೆಸರ್ ಡಾ. ಮಧು ಮಲ್ಲೇಶಪ್ಪ ತಿಳಿಸಿದರು. ನಗರದ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲೂಕಿನ ಲಕ್ಕೀಹಳ್ಳಿ ತರಬೇತಿ ಹಾಗೂ ಪ್ರಾತ್ಯಕ್ಷಿಕ ಕೇಂದ್ರದಲ್ಲಿ ರಾಷ್ಟ್ರೀಯ ಔಷಧಿ ಸಸ್ಯ ಮಂಡಳಿ ಹಾಗೂ ಗಾರ್ಡನ್ ಸಿಟಿ ಯೂನಿವರ್ಸಿಟಿ ಬೆಂಗಳೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಶ್ವಗಂಧ ಬೆಳೆಯ ಕುರಿತು ತಾಂತ್ರಿಕ ಮಾಹಿತಿ ಹಾಗೂ ಆಯ್ದ ರೈತ ರಿಗೆ ಅಶ್ವಗಂಧ ಸಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬೆಂಗಳೂರಿನ ಕರ್ನಾಟಕ ಔಷಧಿ ಸಸ್ಯಗಳ ಪ್ರಾಧಿಕಾರದ ಕೆ.ಎನ್. ಪ್ರಭು, ಮಾತನಾಡಿ ಗ್ರಾಮೀಣ ಭಾಗದಲ್ಲಿ ಹಿರೇಮದ್ದು ಎಂದು ಖ್ಯಾತಿ ಪಡೆದ ಅಶ್ವಗಂಧ ಅನೇಕ ಖಾಯಿಲೆಗಳಿಗೆ ರಾಮಬಾಣವಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಇದರ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಅದನ್ನು ಬೆಳೆಯುತ್ತಿಲ್ಲ. ಹಾಗಾಗಿ ಇಂದು ಅಶ್ವಗಂಧದ ಬಗ್ಗೆ ಕಾರ್ಯಾಗಾರ ಏರ್ಪಡಿಸಿ ರೈತರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಶ್ವಗಂಧ ಬೆಳೆಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಅದರಲ್ಲೂ ಕರೋನಾ ನಂತರ ಅಶ್ವಗಂಧ ಸೇರಿದಂತೆ ಅನೇಕ ಆಯುರ್ವೇದ ಬೆಳೆಗಳನ್ನು ಜನರು ತೆಗೆದುಕೊಳ್ಳುತ್ತಿದ್ದು ಇದರಿಂದಾಗಿ ರೈತರಿಗೆ ಆದಾಯವೂ ಬರುತ್ತಿದೆ ಎಂದರು.
ಬೈಫ್ ಸಂಸ್ಥೆಯ ಹಿರಿಯ ಅಧಿಕಾರಿ ಡಾ. ಹಿರೇಮಠ್ ಅವರು ಅಶ್ವಗಂಧದ ಕುರಿತಂತೆ ಸಮಗ್ರ ತಾಂತ್ರಿಕ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಆಯ್ದ ರೈತರಿಗೆ ಸಾಂಕೇತಿಕವಾಗಿ ಅಶ್ವಗಂಧದ ಸಸ್ಯಗಳನ್ನು ವಿತರಿಸಲಾಯಿತು. ಬೈಫ್ ಸಂಸ್ಥೆಯ ಮುಖ್ಯಸ್ಥ ಎಂ.ಎನ್.ಕುಲಕರ್ಣಿ, ಲಕ್ಕಿಹಳ್ಳಿ ತರಬೇತಿ ಕೇಂದ್ರದ ಎಲ್ಲ ಸಿಬ್ಬಂದಿ ಭಾಗಿಯಾಗಿದ್ದರು. ಡಾ.ಈರಣ್ಣ ಹೂಗಾರ ಕಾರ್ಯಕ್ರಮ ನಿರೂಪಣೆ ಮಾಡಿದರು.ಕೋಟ್....ಅಶ್ವಗಂಧ ಬೆಳೆಯ ಪ್ರಾಮುಖ್ಯತೆ ಹಾಗೂ ಅದರ ಉಪಯೋಗದ ಕುರಿತು ವೈಜ್ಞಾನಿಕ ಮಾಹಿತಿಯನ್ನು ನೀಡಿ ಆಗಸ್ಟ್ ತಿಂಗಳ ಒಳಗೆ ಬೀಜ ಬಿತ್ತನೆ ಮಾಡಬೇಕು. ಯಾವುದೇ ರಾಸಾಯನಿಕಗಳನ್ನು ಬಳಸದೇ ಸಾವಯವದಲ್ಲಿ ಕೃಷಿ ಮಾಡಿದರೆ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಜೊತೆಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದರಿಂದ ಇನ್ನೂ ಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು.
----ಡಾ. ಮಧು ಮಲ್ಲೇಶಪ್ಪ, ಪ್ರೊಫೆಸರ್ ಗಾರ್ಡನ್ ಸಿಟಿ ಯೂನಿವರ್ಸಿಟಿ ಲೈಫ್‌ಸೈನ್ಸ್ ಬೆಂಗಳೂರು