ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಬೆಳೆಯಿರಿ: ಮೆದಿಕೇರಿ

| Published : Sep 30 2024, 01:23 AM IST

ಸಾರಾಂಶ

ಆರೋಗ್ಯದ ದೃಷ್ಟಿಯಿಂದ ರೈತರು ಕೃಷಿ ಚಟುವಟಿಕೆಯಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ರೈತ ಸಂಪರ್ಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಆರೋಗ್ಯದ ದೃಷ್ಟಿಯಿಂದ ರೈತರು ಕೃಷಿ ಚಟುವಟಿಕೆಯಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಸಮೂಹ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಅಮೃತವರ್ಷಿಣಿ ರೈತ ಉತ್ಪಾದಕರ ಸಂಸ್ಥೆ ನಿಯಮಿತ ಮತ್ತು ಹೈದ್ರಾಬಾದ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ರೈತ ಸಂಪರ್ಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಗತಿಪರ ರೈತ ಶರಣೆಗೌಡ ಗುಮಗೇರಿ ಮಾತನಾಡಿ, ರೈತರು ಹೆಚ್ಚಿನ ಇಳುವರಿಗೆ ಬೆನ್ನುಬಿದ್ದು, ರಸಾಯನಿಕ ಬಳಸಿ ಆರೋಗ್ಯ ಕೆಡಿಸುತ್ತಿದ್ದಾರೆ. ಸಾಲಕ್ಕೆ ಸಿಲುಕಿ ಜೀವನ ನಡೆಸಲು ಕಷ್ಟಕರವಾಗಿದೆ ಎಂದರು.

ಮುಖ್ಯ ಕಾರ್ಯನಿರ್ವಾಹಕ ಸಂತೋಷ ಸರನಾಡಗೌಡರ, ಸಂಸ್ಥೆಯ ವಿವಿಧ ಸೌಲಭ್ಯಗಳ ಮಾಹಿತಿ ನೀಡಿ, ಒಬ್ಬ ರೈತ ಆಗಬೇಕಿದ್ದರೆ ಬೆಳೆ, ಹವಾಮಾನ, ಬೆಳೆ ರೋಗ, ಪಶು ಪ್ರಾಣಿಗಳ ಬಗ್ಗೆ ಜ್ಞಾನ ಹೊಂದಿರಬೇಕು, ಜೊತೆಗೆ ವ್ಯಾಪಾರದ ಮಹತ್ವ ಸಹ ತಿಳಿದಿರಬೇಕು, ಕೃಷಿ ಕ್ಷೇತ್ರದಲ್ಲಿ ರೈತರು ಅನುಭವಿಸುವ ಸಮಸ್ಯೆಗಳು, ಸಿರಿಧಾನ್ಯಗಳ ಮಹತ್ವ, ಇತ್ತಿಚಿನ ಕೃಷಿ ಚಟುವಟಿಕೆಯ ಬದಲಾವಣೆಯಿಂದ ಆಗುವ ಲಾಭ ಮತ್ತು ನಷ್ಟದ ಕುರಿತು ಹೇಳಿದರು.

ಸಾವಯುವ ಕೃಷಿಕ ಅನಂತರಾವ ಕುಲಕರ್ಣಿ, ಮಲ್ಲಿಕಾರ್ಜುನ ಪಾಟೀಲ, ರೈತರಾದ ಮಹಾಂತಗೌಡ ಮಾಲಿ ಪಾಟೀಲ್, ಸಗರಪ್ಪ ಮೂಲಿಮನಿ, ಹನಮಂತಪ್ಪ ಸಂಕನಾಳ, ಈರಣ್ಣ ರೋಣದ ಅನಿಸಿಕೆ ಹಂಚಿಕೊಂಡರು. ತಾವರಗೇರಾ ಹೋಬಳಿಯ ವಿವಿಧ ಗ್ರಾಮಗಳ 80ಕ್ಕೂ ಹೆಚ್ಚು ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು. ವೀರೇಶ ಹೊಸಮನಿ ಸ್ವಾಗತಿಸಿದರು. ಬೇಬಿರೇಖಾ ಉಪ್ಪಳ ನಿರೂಪಿಸಿದರು. ಸಂತೋಷ ಬಿಳೆಗುಡ್ಡ ವಂದಿಸಿದರು. ಅಮೃತವರ್ಷಿಣಿ ರೈತ ಉತ್ಪಾದಕರ ಸಂಸ್ಥೆ ನಿಯಮಿತದ ನಿರ್ದೇಶಕರು ಮತ್ತು ಇತರರು ಇದ್ದರು.