ರಾಸಾಯನಿಕ ಮುಕ್ತ ನೈಸರ್ಗಿಕ ಬೆಳೆ ಬೆಳೆಯಿರಿ: ಡಾ.ಲತಾ ಆರ್.ಕುಲಕರ್ಣಿ

| Published : Aug 08 2024, 01:36 AM IST

ಸಾರಾಂಶ

ರೈತರು ರಾಸಾಯನಿಕಗಳ ಅವಲಂಬನೆಯಿಂದ ಹೊರಬಂದು ನೈಸರ್ಗಿಕ ಕೃಷಿ ಮಾಡಿ ರಾಸಾಯನಿಕ ಮುಕ್ತ ಬೆಳೆ ಬೆಳೆಯಬೇಕಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಲತಾ ಆರ್.ಕುಲಕರ್ಣಿ ಹೇಳಿದರು. ಮಾಗಡಿಯಲ್ಲಿ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಚಂದುರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ತರಬೇತಿಕನ್ನಡಪ್ರಭ ವಾರ್ತೆ ಮಾಗಡಿ

ರೈತರು ರಾಸಾಯನಿಕಗಳ ಅವಲಂಬನೆಯಿಂದ ಹೊರಬಂದು ನೈಸರ್ಗಿಕ ಕೃಷಿ ಮಾಡಿ ರಾಸಾಯನಿಕ ಮುಕ್ತ ಬೆಳೆ ಬೆಳೆಯಬೇಕಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಲತಾ ಆರ್.ಕುಲಕರ್ಣಿ ಹೇಳಿದರು.

ತಾಲೂಕಿನ ಚಂದುರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಮತ್ತು ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್‌ ಸಹಯೋಗದಲ್ಲಿ ಪಂಚಾಯಿತಿ ಮಟ್ಟದ ಕೃಷಿ ಜೀವನೋಪಾಯ ಸಮುದಾಯದ ಸಂಪನ್ಮೂಲ ವ್ಯಕ್ತಿಗಳಿಗೆ(ಕೃಷಿ ಸಖಿಯರಿಗೆ) 5 ದಿನದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ವಿಜ್ಞಾನ ಕೇಂದ್ರ ಎಲ್ಲಾ ರೀತಿಯ ತಾಂತ್ರಿಕ ಸಲಹೆ ನೀಡುತ್ತಿದೆ. ತರಬೇತಿಯಲ್ಲಿ ಪಡೆದ ಜ್ಞಾನ ಕಾರ್ಯರೂಪಕ್ಕೆ ತಂದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ರಾಸಾಯನಿಕ ಮುಕ್ತ ಬೆಳೆಗೆ ಹೆಚ್ಚಿನ ಬೇಡಿಕೆ ಇದ್ದು ಮನುಷ್ಯರಿಗೆ ಆರೋಗ್ಯಕ್ಕೂ ಹೆಚ್ಚು ಸಹಕಾರಿ ಆಗುವುದರಿಂದ ರಾಸಾಯನಿಕ ಮುಕ್ತ ಬೆಳೆ ಬೆಳೆಯಲು ರೈತರು ಮುಂದೆ ಬರಬೇಕು. ರಾಸಾಯನಿಕ ಬೆಳೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ತರಬೇತಿ ಪಡೆದ ಮಹಿಳೆಯರು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ತೋಟಗಾರಿಕಾ ವಿಜ್ಞಾನಿ ಡಾ.ದೀಪಾ ಪೂಜಾ ಮಾತನಾಡಿ, ಐದು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿಯಲ್ಲಿ ಮಣ್ಣಿನ ಪೋಷಕಾಂಶಗಳ ನಿರ್ವಹಣೆಗಾಗಿ ಜೀವಾಮೃತದ ಬಳಕೆ, ಹೊದಿಕೆಯ ಮಹತ್ವ ಮತ್ತು ಜೈವಿಕ ಗೊಬ್ಬರಗಳ ಬಳಕೆ ಮತ್ತು ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ನೀರಿನ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಬೀಜ ಮತ್ತು ಸಸಿಗಳ ನಿರ್ವಹಣೆ, ಆಹಾರದಲ್ಲಿನ ಪೋಷಕಾಂಶಗಳ ಬಗ್ಗೆ ಅರಿವು, ವಿಸ್ತರಣಾ ವಿಧಾನಗಳು ಮತ್ತು ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರ ಅನುಭವದ ಜೊತೆಗೆ ನೈಸರ್ಗಿಕ ಕೃಷಿಯಲ್ಲಿ ಬಳಸುವ ಜೀವಾಮೃತ, ಘನಜೀವಾಮೃತ, ಬೀಜಾಮೃತ, ಸಸ್ಯ ಸಂರಕ್ಷಣೆಗಾಗಿ ವಿವಿಧ ರೀತಿಯ ಮೋಹಕ ಬಲೆಗಳ ಬಳಕೆ ಮತ್ತು ದಶಪರ್ಣಿ ಕಷಾಯಗಳ ತಯಾರಿಕಾ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ದಿನೇಶ್, ಡಾ. ಎಂ.ಎಸ್.ರಾಜೇಂದ್ರ ಪ್ರಸಾದ್, ಡಾ.ಪ್ರೀತು, ಡಾ. ಸೌಜನ್ಯ, ರೂಪ, ಉಮಾರಾಣಿ ಹಾಗೂ ಸಂಜೀವಿನಿ ಒಕ್ಕೂಟದ ಕಾರ್ಯನಿರ್ವಾಹಕಿ ಅರುಣಾ ಇತರರು ಪಾಲ್ಗೊಂಡಿದ್ದರು.