ಸಾರಾಂಶ
ಮಸ್ಕಿ ನಾಲಾ ಜಲಾಶಯದ ವ್ಯಾಪ್ತಿ ಮೂರು ಗ್ರಾಪಂಗಳ ವತಿಯಿಂದ ಜಲಾಶಯದ ನಾಲೆಯ ಅಭಿವೃದ್ಧಿ ಕಾರ್ಯ ಮಾಡಬೇಕು. ಆದ್ದರಿಂದ ಪ್ರತಿವರ್ಷ ಮೂರು ತಿಂಗಳಲ್ಲಿ ಮುಗಿಸುವ ಕೆಲಸ ಮಾಡಬೇಕು
ಕನ್ನಡಪ್ರಭ ವಾರ್ತೆ ಮಸ್ಕಿ
ತಾಲೂಕಿನಲ್ಲಿ ಮಳೆಯ ಕೊರೆತೆಯಿಂದ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕುಂತಾಗುತ್ತಿದೆ. ಆದ್ದರಿಂದ ಮಸ್ಕಿ ನಾಲಾ ಜಲಾಶಯ ಭಾಗದ ರೈತರು ನೀರಿನ ಲಭ್ಯತೆ ಆಧರಿಸಿ ಬೆಳೆಗಳನ್ನು ಬೆಳೆಯಿರಿ ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅದ್ಯಕ್ಷ ಶಾಸಕ ಆರ್.ಬಸನಗೌಡ ಮನವಿ ಮಾಡಿದರು.ತಾಲೂಕಿನ ಮಾರಲದಿನ್ನಿಯಲ್ಲಿ ಸಹಾಯಕ ಆಯುಕ್ತ ಬಸವಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಸ್ಕಿ ನಾಲಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸೋಮವಾರ ಮಾತನಾಡಿ, ಕಾಲುವೆಗಳಿಗೆ ನೀರು ಹರಿಸಲಾಗುವುದರಿಂದ ರೈತರು ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದರು.
ನರೇಗಾದಡಿ ಕಾಲುವೆ ಸ್ವಚ್ಛಗೊಳಿಸಿ: ಮಸ್ಕಿ ನಾಲಾ ಜಲಾಶಯದ ವ್ಯಾಪ್ತಿ ಮೂರು ಗ್ರಾಪಂಗಳ ವತಿಯಿಂದ ಜಲಾಶಯದ ನಾಲೆಯ ಅಭಿವೃದ್ಧಿ ಕಾರ್ಯ ಮಾಡಬೇಕು. ಆದ್ದರಿಂದ ಪ್ರತಿವರ್ಷ ಮೂರು ತಿಂಗಳಲ್ಲಿ ಮುಗಿಸುವ ಕೆಲಸ ಮಾಡಬೇಕು, ಗ್ರಾಪಂ ಅವರಿಗೆ ಒಂದು ತಿಂಗಳು ಮುಂಚೆಯೇ ಎಸ್ಟಿಮೆಂಟ್ ಮಾಡಿ ನೀರಾವರಿ ಇಲಾಖೆಯಿಂದ ಕಳಿಸಿ ಎಂದರು. ಮುಂದಿನ ವರ್ಷದಿಂದ ಕಾಲುವೆಗೆ ನೀರು ಬಿಡುವ ಮುನ್ನ ಕಾಲುವೆಗೆ ಸ್ವಚ್ಛ ಮಾಡಿ ಇದರಿಂದ ರೈತರ ಜಮೀನುಗಳಿಗೆ ನೀರು ತಲುಪುತ್ತದೆ ಎಂದು ಶಾಸಕರು ತಿಳಿಸಿದರು.ಗುತ್ತಿಗೆದಾರರ ಬಿಲ್ ಪಾವತಿ ಮಾಡಬೇಡಿ:
₹52 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮಸ್ಕಿ ನಾಲಾ ಜಲಾಶಯದ ಕಾಲುವೆಗಳ ಆಧುನೀಕರಣ ಕಾಮಗಾರಿ ಈಗಾಗಲೇ ಗುತ್ತಿಗೆದಾರರಿಗೆ ಕೊಟ್ಟಿರುವ ಅವಧಿ ಮುಗಿದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ನೀವು ಏನೂ ಮಾಡುತ್ತಿದ್ದಿರೀ ಎಂದು ನೀರಾವರಿ ಇಲಾಖೆ ಅಧಿಖಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಸಕರು, ಇನ್ನೂ ಒಂದು ತಿಂಗಳು ಒಳಗೆ ಕಾಲುವೆ ಬದಿ ಸರ್ವಿಸ್ ರಸ್ತೆ ಸೇರಿ ಎಲ್ಲಾ ಕಾಮಗಾರಿ ಮಾಡಿ ಮುಗಿಸಬೇಕು. ಇಲ್ಲದಿದ್ದರೆ ರೀಟೆಂಡರ್ ಮಾಡಿಸಿ ಎಂದು ನೀರಾವರಿ ಇಲಾಖೆ ಸತ್ಯನಾರಾಯಣಗೆ ಸೂಚಿಸಿದರು. ಕಾಮಗಾರಿ ಮುಗಿದರೆ ಕೂಡಲೇ ನನಗೆ ಮಾಹಿತಿ ನೀಡಬೇಕು ನಾನು ರೈತರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಬಿಲ್ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳು, ಮುಖಂಡರು, ರೈತರು ಇದ್ದರು.