ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ವಿಶ್ವದ ಮುಂದೆ ಬಹುದೊಡ್ಡ ಸವಾಲಾಗಿರುವ ಹವಾಮಾನ ಬದಲಾವಣೆ, ಪ್ರಕೃತಿ ವಿಕೋಪ ತಡೆಯಲು ಭೂ ಮಂಡಲದಲ್ಲಿ ಹಸಿರೀಕರಣ ಮಾಡುವುದು ಅತೀ ಅಗತ್ಯವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.ಅರಣ್ಯ ತರಬೇತಿ ಕೆಂದ್ರ ನೌಬಾದ್‌ನಲ್ಲಿ ಬುಧವಾರ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅರಣ್ಯ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ, ವಿಶ್ವ ಪರಿಸರ ದಿನಾಚರಣೆ ಹಾಗೂ ಲಕ್ಷ ವೃಕ್ಷ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಪ್ರಕೃತಿ ವಿಕೋಪದಿಂದ ತತ್ತರಿಸಿದೆ. ಜಾಗತಿಕ ತಾಪಮಾನ ಹೆಚ್ಚಳವಾಗಿದೆ. ತಾಪಮಾನ ಹೆಚ್ಚಳದಿಂದ ದೇಶದ ಉತ್ತರ ಭಾಗದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಇಂತಹ ಅನಾಹುತಗಳು ತಡೆಯಬೇಕಾದರೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕಾದರೆ ಸಸಿಗಳು ಬೆಳೆಸುವುದು ಅತಿ ಅವಶ್ಯಕವಾಗಿದೆ ಎಂದರು.ಮುಂಬರುವ ದಿನಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕಾಗಿ 20 ಲಕ್ಷ ಜನಸಂಖ್ಯೆ ಇರುವ ಬೀದರ್ ಜಿಲ್ಲೆಯಲ್ಲಿ ಮುಂದಿನ 8-10 ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಶೇ.25ರಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಬೇಕಾಗಿದೆ. ಅದಕ್ಕಾಗಿ ಪ್ರಸಕ್ತ ವರ್ಷ 20ಲಕ್ಷ ಸಸಿ ನೆಡುವ ಗುರಿಯ ಪೈಕಿ 12ಲಕ್ಷ ಸಸಿ ನೆಡಲಾಗಿದ್ದು ಇನ್ನುಳಿದ ಸಸಿಗಳನ್ನು ಮೂರು ತಿಂಗಳ ಒಳಗಾಗಿ ನೆಡಲಾಗುತ್ತದೆ ಎಂದು ಹೇಳಿದರು.
ಹಸಿರೀಕರಣ ಸಿಎಂ ಅವರಿಂದಲೂ ಸೂಕ್ಷ್ಮ ಅವಲೋಕನ: ಕಳೆದ ವರ್ಷ 5 ಕೋಟಿ ಸಸಿ ನೆಡಲಾಗಿದೆ ಎಂದು ಸಿಎಂ ಗಮನಕ್ಕೆ ತಂದಾಗಿ 5 ಕೋಟಿ ಸಸಿಗಳು ಎಲ್ಲಿವೆ ತೋರಿಸಿ ಎಂದು ಹೇಳಿದ್ದಾರೆ. ಹೀಗಾಗಿ ಸಸಿಗಳನ್ನು ನೆಡುವುದಷ್ಟೇ ಅಲ್ಲ ಅವುಗಳ ಜಿಯೋ ಟ್ಯಾಗಿಂಗ್ ಮಾಡಿ ಅಗಸ್ಟ್ ತಿಂಗಳೊಳಗೆ ನೈಜ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ವರದಿ ಕೈಸೇರಿದ ತಕ್ಷಣ ಸಾರ್ವಜನಿಕರ ಮಾಹಿತಿಗಾಗಿಯೂ ಅದನ್ನು ಬಹಿರಂಗಪಡಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.ಕಳೆದ ವರ್ಷ 5.40 ಕೋಟಿ ಸಸಿಗಳನ್ನು ನೆಡಲಾಗಿದೆ. ಈ ವರ್ಷ 5 ಕೋಟಿ ಸಸಿಗಳನ್ನು ನೆಡಲಾಗುವುದು. ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಇಲ್ಲಿಯವರೆಗೆ 8ರಿಂದ 10 ಅಡಿ ಉದ್ದ ಇರುವ 5 ಲಕ್ಷ ಗಿಡಗಳನ್ನು ರಸ್ತೆಯ ಬದಿಗಳಲ್ಲಿ ನೆಡಲಾಗಿದೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ 3500 ಏಕರೆ ಒತ್ತುವರಿ ತೆರವುಗೊಳಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ 850 ಏಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್, ಶರಣು ಸಲಗರ, ಭೀಮರಾವ್ ಪಾಟೀಲ್. ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಗ್ಯಾರಂಟಿ ಯೋಜನೆಯ ಜಿಲ್ಲಾ ಸಂಯೋಜಕ ಅಮೃತರಾವ್ ಚಿಮಕೋಡೆ, ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ, ಅರಣ್ಯ ಇಲಾಖೆಯ ಬ್ರಿಜೇಶಕುಮಾರ ದೀಕ್ಷಿತ, ಸುನೀಲಕುಮಾರ ಪನ್ವಾರ್, ಎಸ್ಪಿ ಪ್ರದೀಪ ಗುಂಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಿಇಒ ಗಿರೀಶ ಬದೋಲೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.