ಸಾರಾಂಶ
ಶಿರಸಿ: ಅಡಕೆ ಜತೆ ತೋಟದಲ್ಲಿ ಮಿಶ್ರಬೆಳೆ ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸಿ, ಆರ್ಥಿಕ ಮಟ್ಟ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸಲಹೆ ನೀಡಿದರು.ಶನಿವಾರ ತಾಲೂಕಿನ ಹುಲೇಕಲ್ನ ಅಂಬೇಡ್ಕರ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯ ಆಶ್ರಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃಷಿ ಇಲಾಖೆಯಿಂದ ₹೧.೨೫ ಕೋಟಿ ವೆಚ್ಚದಲ್ಲಿ ರೈತರಿಗೆ ಅಗತ್ಯ ಯಂತ್ರೋಪಕರಣ ನೀಡುವ ಮೂಲಕ ಕೃಷಿ ಹಾಗೂ ತೋಟಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಯಂತ್ರೋಪಕರಣಕ್ಕೆ ಸರ್ಕಾರದ ಸಬ್ಸಿಡಿ ಪಡೆದು ಅದನ್ನು ಉಪಯೋಗಪಡಿಸಿಕೊಳ್ಳದ ರೈತರು ಇದ್ದಾರೆ. ಅದು ಆಗಬಾರದು. ತಮ್ಮ ಕೃಷಿ ಚಟುವಟಿಕೆಗಳಿಗೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.ಕಳೆದ ವರ್ಷ ಮಳೆಯ ಅಭಾವದಿಂದ ಹಾನಿ ಅನುಭವಿಸಿದರೆ, ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದ ಅಡಕೆಗೆ ಕೊಳೆರೋಗ ತಗುಲಿಗೆ ಶೇ. ೪೦ರಿಂದ ೫೦ರಷ್ಟು ಬೆಳೆಹಾನಿಯಾಗಿದೆ. ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಕ್ಷೇತ್ರದ ಶಾಸಕನಾಗಿ ಕೊಳೆ ರೋಗದಿಂದ ಹಾನಿಯಾದ ಅಡಕೆಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸಲು ಮುಖ್ಯಮಂತ್ರಿ ಭೇಟಿಯಾಗಿ ವಿನಂತಿಸಿದ್ದೇನೆ. ರೈತರ ಪರವಾಗಿ ಹೋರಾಟಕ್ಕೆ ಬದ್ಧನಾಗಿದ್ದೇನೆ ಎಂದರು.ಹುಲೇಕಲ್ ಗ್ರಾಪಂ ಅಧ್ಯಕ್ಷ ಖಾಸಿಂ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸುತ್ತು ನಿಧಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಟಿ.ಎಚ್. ನಟರಾಜ, ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ಗ್ರಾಪಂ ಉಪಾಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.