ಸ್ವ ಉದ್ಯೋಗ ನಡೆಸಿಕೊಂಡು ನೀವು ಬೆಳೆಯುವುದರ ಜೊತೆಗೆ ಇತರರ ಬೆಳೆಸಿ

| Published : Jan 21 2024, 01:32 AM IST

ಸ್ವ ಉದ್ಯೋಗ ನಡೆಸಿಕೊಂಡು ನೀವು ಬೆಳೆಯುವುದರ ಜೊತೆಗೆ ಇತರರ ಬೆಳೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗದಲ್ಲಿ ನೀವು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‌ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ನಿರ್ದೇಶಕ ಗಣೇಶ ಬಿ. ಹೇಳಿದರು.

ಮುಂಡರಗಿ: ನಿತ್ಯದ ದುಡಿಮೆಯಲ್ಲಿ ಒಂದಿಷ್ಟು ಉಳಿತಾಯ ಮಾಡುವುದು ಅತ್ಯಂತ ಅವಶ್ಯವಾಗಿದೆ. ನಾವು ಉಳಿತಾಯ ಮಾಡಿದ್ದರ ಮೇಲೆ ನಮಗೆ ಸಂಘ ಸಂಸ್ಥೆಗಳಲ್ಲಿ ಸಾಲ ನೀಡಲಿದ್ದು, ಆ ಸಾಲದ ಮೂಲಕ ವಿವಿಧ ಸ್ವ ಉದ್ಯೋಗಗಳನ್ನು ಮಾಡುವ ಮೂಲಕ ಉದ್ಯೋಗದಲ್ಲಿ ನೀವು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‌ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ನಿರ್ದೇಶಕ ಗಣೇಶ ಬಿ. ಹೇಳಿದರು.ಅವರು ಶನಿವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಮುಂಡರಗಿ ತಾಲೂಕು, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ಸಮಾವೇಶ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಸಂಘಟನೆಯು 2009ರಲ್ಲಿ ಗದಗ ಜಿಲ್ಲೆಗೆ ಬಂದಿದೆ. ಈ ಹಿಂದೆ ಶಿರಹಟ್ಟಿ ಹಾಗೂ ಮುಂಡರಗಿ ಎರಡೂ ಸೇರಿ ಒಂದು ಯೋಜನಾ ಕಚೇರಿ ಕಾರ್ಯನಿರ್ವಹಿಸಲಾಗುತ್ತಿತ್ತು. ಕಳೆದ ವರ್ಷ ಮುಂಡರಗಿ ತಾಲೂಕಿನಲ್ಲಿ ಯೋಜನಾ ಕಚೇರಿ ಪ್ರಾರಂಭಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 2542 ಸ್ವಸಹಾಯ ಸಂಘಗಳಿವೆ. ಇಂದು ನಮ್ಮ ಸಂಸ್ಥೆ ಬೆಳೆದು ಹೆಮ್ಮರವಾಗಿ ನಿಂತಿದೆ. ನಮ್ಮ ಸಂಘದ ಎಲ್ಲ ಸದಸ್ಯರು ಕಟ್ಟಿದ ಮೊತ್ತ ಮುಂಡರಗಿ ತಾಲೂಕಿನಲ್ಲಿ 14 ಕೋಟಿ ರು.ಗಳು ಉಳಿತಾಯವಾಗಿದೆ. ನಿಮ್ಮ ಸಂಘದ ಹೆಸರಿನಲ್ಲಿ ಸ್ಥಳೀಯ ಬ್ಯಾಂಕಿನಲ್ಲಿ ಖಾತೆ ತೆರೆಯಲಾಗಿದೆ. ಅಲ್ಲಿ ನಿಮ್ಮ ಹಣ ಅತ್ಯಂತ ಜಾಗೃತಿಯಿಂದ ಇದೆ.

ನಿಮ್ಮ 14 ಕೋಟಿ ರು.ಗಳ ಉಳಿತಾಯದ ಹಣದಿಂದಾಗಿ ಇಂದು ಬ್ಯಾಂಕು 63 ಕೋಟಿ ರು.ಗಳನ್ನು ನಿಮಗೆ ಸಾಲದ ರೂಪದಲ್ಲಿ ಮುಂಡರಗಿ ತಾಲೂಕಿಗೆ ನೀಡಿದೆ. ನೀವು ಮಾಡುವ ವ್ಯವಹಾರದ ನಂಬಿಕೆ ವಿಶ್ವಾಸದಲ್ಲಿ ನಿಮಗೆ ನೀಡುವ 63 ಕೋಟಿ ರು.ಗಳ ಸಾಲಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಜಾಮೀನು ಹಾಕಿದ್ದಾರೆ ಎಂದರು. ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಅನೇಕರು ಉಳಿತಾಯ ಮಾಡಿ ಆ ಉಳಿತಾಯದ ಮೇಲೆ ಸಾಲ ಪಡೆದು ವಿವಿಧ ಸ್ವಯಂ ಉದ್ಯೋಗದಲ್ಲಿ ತೊಡಗಿ ಯಶಸ್ವಿಯಾಗಿದ್ದಾರೆ. ಹೆಣ್ಣು ಮಕ್ಕಳು ಜಾಗೃತರಾಗಿ ಉದ್ಯೊಗಸ್ಥರಾದರೆ ಸಮಾಜದಲ್ಲಿ ಬಹಳಷ್ಟು ಬದಲಾವಣೆ ತರಲು ಸಾಧ್ಯವಾಗುತ್ತದೆ. ಮನೆಗಳಲ್ಲಿ ಕೌಟುಂಬಿಕ ಸಾಮರಸ್ಯ ಮತ್ತು ಶಿಸ್ತು ಇರಬೇಕು. ಮಕ್ಕಳಿಗೆ‌ ಶಿಕ್ಷಣ, ಶಿಸ್ತು ಮತ್ತು ಸಂಯಮ ಕಲಿಸುವುದುರ ಜೊತೆಗೆ ನೈತಿಕ ಶಿಕ್ಷಣ ನೀಡಬೇಕು ಎಂದರು. ಸಾನಿಧ್ಯ ವಹಿಸಿದ್ದ ನಾಡೋಜ ಜ.ಡಾ.ಅನ್ನದಾನೀಶ್ಚರ‌ ಮಹಾಸ್ವಾಮೀಜಿ ಮಾತನಾಡಿ, ಡಾ. ವೀರೇಂದ್ರ ಹೆಗಡೆಯವರು 3-4 ಬಾರಿ ಮುಂಡರಗಿಗೆ ಆಗಮಿಸಿ ಬರಗಾಲದ ಸಂದರ್ಭದಲ್ಲಿ ಜನತೆಗೆ ಬಟ್ಟೆ ಬರೆ‌ಗಳನ್ನು ನೀಡಿದ್ದಾರೆ. ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ಕೊಡುವುದು, ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಕೊಡುವುದು ಸೇರಿದಂತೆ ಸರ್ಕಾರ ಮಾಡಲಾರದಂತಹ ಕಾರ್ಯವನ್ನು ಧರ್ಮಸ್ಥಳ ಸಂಘದಿಂದ ಮಾಡುತ್ತಾ ಬರಲಾಗುತ್ತಿದೆ. ಧರ್ಮಸ್ಥಳ ಸಂಘದವರು ವರ್ಷದುದ್ದಕ್ಕೂ ಉತ್ತಮವಾದ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಎ.ಕೆ. ಮುಲ್ಲಾನವರ, ನಾಗೇಶ ಹುಬ್ಬಳ್ಳಿ, ಕವಿತಾ ಉಳ್ಳಾಗಡ್ಡಿ, ಜ್ಯೋತಿ ಕುರಿಯವರ, ರೀಹಾನಾಬೇಗಂ ಕೆಲೂರು, ಗವಿಸಿದ್ದಯ್ಯ ಹಳ್ಳಿಕೇರಿಮಠ, ಅರುಣಾ ಪಾಟೀಲ, ಡಾ. ವನಜಾಕ್ಷಿ ಭರಮಗೌಡ್ರ, ಎಸ್.ಎಂ. ಹಂಚಿನಾಳ, ಮಂಜುಳಾ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸ್ವಯಂ ಉದ್ಯೋಗಗಳಲ್ಲಿ ಸಾಲ ಸೌಲಭ್ಯಪಡೆದು ಉತ್ತಮವಾಗಿ ವ್ಯವಹಾರ ನಡೆಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ವಿಶಾಲ್ ಮಲ್ಲಾಪೂರ ಸ್ವಾಗತಿಸಿ, ಮಹಾಂತೇಶ ಎಂ. ನಿರೂಪಣೆ ಮಾಡಿದರು.