ಸಾರಾಂಶ
ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಕನಕಗಿರಿ
ನಮ್ಮೆಲ್ಲರಿಗೂ ಉಸಿರು ನೀಡುವ ಸಸಿಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಮೇಲ್ಚಿಚಾರಕರ ಎನ್. ಗಂಗಾಧರ ಹೇಳಿದರು.ತಾಲೂಕಿನ ಮುಸಲಾಪುರ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.ನಮ್ಮದು ಒಣಭೂಮಿ ಪ್ರದೇಶವಾಗಿದ್ದು, ಗಿಡ ಬೆಳೆಸಲು ನೀರಿನ ಸಮಸ್ಯೆ ಎಂದು ಭಾವಿಸಿ ಪರಿಸರ ಸಂರಕ್ಷಿಸುವ ಕಾರ್ಯವನ್ನು ಕೈಚೆಲ್ಲುವುದಕ್ಕಿಂತ ಎಲ್ಲೆಲ್ಲಿ ನೀರಿನ ವ್ಯವಸ್ಥೆ ಇದೆಯೋ ಅಲ್ಲಲ್ಲಿ ಸಸಿಗಳನ್ನು ಪೋಷಿಸುವಂತಾದರೆ ಅರಣ್ಯ ಪ್ರದೇಶವಾಗುವುದರಲ್ಲಿ ಸಂಶಯವಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ಸಂರಕ್ಷಣೆ ಕುರಿತು ರಾಜ್ಯದ ಹಲವೆಡೆ ಕಾರ್ಯಕ್ರಮ ಆಯೋಜಿಸಿ ಜನಸಾಮಾನ್ಯರಿಗೆ ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.
ನಂತರ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮಾತನಾಡಿ, ಪರಿಸರ ದಿನಾಚರಣೆ ಜೂನ್ ತಿಂಗಳಿಗೆ ಸೀಮಿತಗೊಳಿಸದೆ ಉಳಿದ ದಿನಗಳಲ್ಲಿಯೂ ಗಿಡ-ಮರಗಳ ಪಾಲನೆ ಮಾಡಿದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಹಸಿರಾಗಲಿದೆ. ನೀರು ಹರಿಯುವ ಕಡೆಗಳಲ್ಲಿ 200ಕ್ಕೂ ಹೆಚ್ಚು ಸಸಿ ನೆಡಲಾಗಿದೆ ಎಂದರು.ವಲಯ ಮೇಲ್ವಿಚಾರಕ ವೈ. ಶಿವಾಜಿ, ಒಕ್ಕೂಟದ ಅಧ್ಯಕ್ಷ ಸುವರ್ಣಮ್ಮ, ಸೇವಾ ಪ್ರತಿನಿಧಿಗಳಾದ ಶಿವಕುಮಾರ, ಸರಸ್ವತಿ, ಯಮನೂರಪ್ಪ ಸೇರಿದಂತೆ ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷರು ಇದ್ದರು.