ತಾಳೆ ಬೆಳೆ ಪರ್ಯಾಯವಾಗಿ ಬೆಳೆದು ಆರ್ಥಿಕ ಸಬಲತೆ ಹೊಂದಿ

| Published : Sep 11 2024, 01:05 AM IST

ಸಾರಾಂಶ

ಕಬ್ಬು ಬೆಳೆ ಮುಧೋಳ ತಾಲೂಕಿನ ವಾಣಿಜ್ಯ ಬೆಳೆಯಾಗಿದ್ದು, ಇದರ ಪರ್ಯಾಯವಾಗಿ ತೋಟಗಾರಿಕೆ ಬೆಳೆಯಾದ ತಾಳೆ ಬೆಳೆಯನ್ನು ಬೆಳೆದು ಹಾಗೂ ಅದಕ್ಕೆ ದೊರಕುವ ಸೌಲಭ್ಯಗಳನ್ನು ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡು ರೈತರು ಆರ್ಥಿಕವಾಗಿ ಸಬಲತೆ ಹೊಂದುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಕರೆ ನೀಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಕಬ್ಬು ಬೆಳೆ ಮುಧೋಳ ತಾಲೂಕಿನ ವಾಣಿಜ್ಯ ಬೆಳೆಯಾಗಿದ್ದು, ಇದರ ಪರ್ಯಾಯವಾಗಿ ತೋಟಗಾರಿಕೆ ಬೆಳೆಯಾದ ತಾಳೆ ಬೆಳೆಯನ್ನು ಬೆಳೆದು ಹಾಗೂ ಅದಕ್ಕೆ ದೊರಕುವ ಸೌಲಭ್ಯಗಳನ್ನು ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡು ರೈತರು ಆರ್ಥಿಕವಾಗಿ ಸಬಲತೆ ಹೊಂದುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಕರೆ ನೀಡಿದರು.ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಸದಾಶಿವ ತಿಮ್ಮಪ್ಪ ಬಟಕುರ್ಕಿ ಅವರ ತೋಟದಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆ, ತಾಳೆ ಬೆಳೆ ಪ್ಲಾಂಟೇಷನ್ ಮೇಘಾ ಡ್ರೈವ್ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಳೆ ಬೆಳೆಯ ಅರಿವು ಕಾರ್ಯಕ್ರಮ ಕುರಿತಂತೆ ಪ್ರಸ್ತಾಪಿಸಿದ ಸಚಿವರು ಮೇಲಿಂದ ಮೇಲೆ ಇಂತಹ ಪರ್ಯಾಯ ಬೆಳೆಗಳ ಅರಿವು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಿ ಇಲಾಖೆಗಳು ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಲು ಮುಂದೆ ಬರುವಂತೆ ಮಾರ್ಗದರ್ಶನ ನೀಡಿದರು.

ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಪಿ.ಎಂ ಸಬರದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಳೆ ಎಣ್ಣೆಯನ್ನು ಸಾಕಷ್ಟು ಬಳಕೆ ಮಾಡುತ್ತಿದ್ದು, ಇಲಾಖೆಯಿಂದ ತಾಳೆಬೆಳೆ ಬೆಳೆಯಲು ಸಿಗುವ ಸಹಾಯ ಸೌವಲತ್ತುಗಳನ್ನು ಬಳಸಿಕೊಂಡು ಸದರಿ ಬೆಳೆಗೆ ದೊರೆಯುವ ವೈಜ್ಞಾನಿಕ ದರದ ಲಾಭವನ್ನು ರೈತರು ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು. ತಾಳೆ ಬೆಳೆ ಕಚ್ಚಾ ತೈಲದ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈಗಾಗಲೇ ಸಾಕಷ್ಟು ಜನ ರೈತರು ವೈಜ್ಞಾನಿಕವಾಗಿ ಈ ಬೆಳೆಯ ಬೇಸಾಯ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆಂದರು.

ಬಾಗಲಕೋಟೆ ತೋ.ವಿ.ವಿ ದ ಸಹ ಪ್ರಾಧ್ಯಾಪಕ ಡಾ.ಸಂಜೀವ ರೆಡ್ಡಿ ಸಂಪನ್ಮೂಲ ವಿಜ್ಞಾನಿಯಾಗಿ ಭಾಗವಹಿಸಿ ತಾಳೆ ಬೆಳೆಯ ಬೇಸಾಯ ಕುರಿತಂತೆ ನೆರೆದಿದ್ದ ರೈತರಿಗೆ ಸವಿವರವಾದ ಮಾಹಿತಿ ಒದಗಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬಸವಕುಮಾರ ಮಾತನಾಡಿದರು.

ಸದಾಶಿವ ತಿಮ್ಮಪ್ಪ ಬಟಕುರ್ಕಿ ಮಾತನಾಡಿದರು. ಗುಲಗಾಲಜಂಬಗಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಅಶೋಕ ಹೊಳೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗದಿಗೆಪ್ಪ ತಿಮ್ಮಣ್ಣ ಕಳ್ಳಿಗುದ್ದಿ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಗುಲಗಾಲ ಜಂಬಗಿ ಗ್ರಾಮದ ಮುಖಂಡರಾದ ವೆಂಕಣ್ಣ ಗಿಡ್ಡಪ್ಪನವರ, ದುಂಡಪ್ಪ ಲಿಂಗರಡ್ಡಿ, ಸಿದ್ದು ಸದಾಶಿವ ಬಟಕುರ್ಕಿ, ಪ್ರಕಾಶ ಲಿಂಗರಡ್ಡಿ ಹಾಗೂ ರೂಗಿ ಗ್ರಾಮದ ತಿಮ್ಮಣ್ಣ ಬಟಕುರ್ಕಿ ಅಲ್ಲದೇ ರೂಗಿ ಮತ್ತು ಗುಲಗಾಲ ಜಂಬಗಿ ಗ್ರಾಮದ ಸಮಸ್ತ ಗುರು ಹಿರಿಯರು ಮತ್ತು ರೈತ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತೋಟಗಾರಿಕೆ ಇಲಾಖೆಯ ಉಪ-ನಿರ್ದೇಶಕ ರವೀಂದ್ರ ಹಕಾಟಿ ಅವರು ಸ್ವಾಗತಿಸಿದರು. ಸಿದ್ದಣ್ಣ ಸತ್ತಿಗೇರಿ ನಿರೂಪಿಸಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ದಂಡೆನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.