ರೈತರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅವರು ತಮ್ಮ ಭೌಗೋಳಿಕ ಗುರುತು ಹಾಗೂ ಪಾರಂಪರಿಕ ಕೃಷಿ ಜ್ಞಾನವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ರೈತರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅವರು ತಮ್ಮ ಭೌಗೋಳಿಕ ಗುರುತು ಹಾಗೂ ಪಾರಂಪರಿಕ ಕೃಷಿ ಜ್ಞಾನವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದರು.ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಐದನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಲು ಅಗತ್ಯ ಮಾಹಿತಿ ಕೊರತೆಯಿಂದ ಅನೇಕ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಂಭವಿಸುತ್ತಿರುವ ಹೊಸ ಬೆಳವಣಿಗೆಗಳು, ತಂತ್ರಜ್ಞಾನ ಹಾಗೂ ಆಧುನಿಕ ವಿಧಾನಗಳ ಬಗ್ಗೆ ಸಮರ್ಪಕ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದ ಕಾರಣ ರೈತರು ಅದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೃಷಿ ಇನ್ನಷ್ಟು ಕಠಿಣ ಹಾಗೂ ಸವಾಲಿನದಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.ಮಾರುಕಟ್ಟೆಯಿಂದ ತರಕಾರಿ ಖರೀದಿಸುವುದಕ್ಕಿಂತ ಮನೆಮಟ್ಟದಲ್ಲೇ ತರಕಾರಿ ಬೆಳೆಯುವ ಸಂಸ್ಕೃತಿ ಬೆಳೆಸಬೇಕು. ಮನೆಗಳಲ್ಲಿ ಬೆಳೆದ ತರಕಾರಿಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಆಹಾರ ಭದ್ರತೆ ಹೆಚ್ಚಿಸುವುದಕ್ಕೂ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದಕ್ಕೂ ಸಾಧ್ಯವಾಗುತ್ತದೆ. ಈ ರೀತಿಯ ಚಿಂತನೆಗಳು ರೈತರ ಬದುಕನ್ನು ಬಲಪಡಿಸುವುದರ ಜೊತೆಗೆ ಸಮಾಜದಲ್ಲಿ ಸ್ವಾವಲಂಬನೆ ಹಾಗೂ ಪರಸ್ಪರ ಸಹಕಾರದ ಮನೋಭಾವನೆ ಬೆಳೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾಸರಗೋಡಿನ ಐಸಿಎಆರ್ ಕೃಷಿ ವಿಜ್ಞಾನಿ ಡಾ.ಎಚ್.ವಿ.ಮಹೇಶ್ವರಪ್ಪ ಮಾತನಾಡಿ, ರೈತರು ಸಮಾಜದ ನಿಜವಾದ ಬೆನ್ನೆಲುಬು. ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಿದಾಗ ಉತ್ಪಾದಕತೆ, ಆಹಾರ ಭದ್ರತೆ ಹಾಗೂ ರಫ್ತು ಹೆಚ್ಚಾಗಿ ದೇಶದ ಹೆಮ್ಮೆ ಹೆಚ್ಚಲಿದೆ ಎಂದ ಅವರು, ತೆಂಗು ಮತ್ತು ಅಡಕೆ ಬೆಳೆಗಳ ಆರ್ಥಿಕ ಸ್ಥಿತಿಗತಿಗಳನ್ನು ಹಾಗೂ ಪೌಷ್ಟಿಕ ಮಹತ್ವವನ್ನು ವಿವರಿಸಿದರು.ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಸಿಬಿಎಸ್‌ಇ ಶಾಲೆ ವಿದ್ಯಾರ್ಥಿಗಳು ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿದರು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ತಪೋವನದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು.
ಎಸ್.ಶಿವಾನಂದ ಪಾಟೀಲ್, ಕೆ.ಎಸ್.ಈಶ್ವರಪ್ಪ, ದರ್ಶನ್ ಪುಟ್ಟಣ್ಣಯ್ಯ, ಬಸವರಾಜ್ ವೀರಾಪುರ, ಎಚ್.ಆರ್. ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಡಾ. ಆರ್.ಸಿ. ಜಗದೀಶ್, ಡಾ. ಎಚ್.ಪಿ. ಮಹೇಶ್ವರಪ್ಪ, ಡಾ. ಎಂ.ವಿ. ಧನಂಜಯ ಭಾಗವಹಿಸಿದರು.- - -
-ಡಿ೨೮-ಬಿಡಿವಿಟಿ೫ ಮತ್ತು ೫(ಎ):ಭದ್ರಾವತಿ ನಗರದ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ೫ನೇ ದಿನ ತರಳಬಾಳು ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಮಹಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯವಹಿಸಿದ್ದರು.