ಕನ್ನಡಪ್ರಭ ವಾರ್ತೆ ಅಥಣಿ ಭೂಮಿಯ ಮೇಲಿನ ಗಿಡ ಮರಗಳು ಎಷ್ಟು ದಿನ ಉಸಿರಾಡುತ್ತವೆಯೋ, ಅಷ್ಟು ದಿನ ಮಾತ್ರ ಮಾನವ ಬದುಕಲು ಸಾಧ್ಯ. ಮರಗಳ ಉಸಿರಾಟ ನಿಂತರೆ ಮಾನವನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ ಪ್ರತಿಯೊಬ್ಬರು ಉದ್ಯಾನವನ, ಶಾಲೆ ಮತ್ತು ದೇವಸ್ಥಾನದ ಆವರಣಗಳಲ್ಲಿ ಗಿಡಮರಗಳನ್ನು ನೆಟ್ಟು ಅವುಗಳನ್ನು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭೂಮಿಯ ಮೇಲಿನ ಗಿಡ ಮರಗಳು ಎಷ್ಟು ದಿನ ಉಸಿರಾಡುತ್ತವೆಯೋ, ಅಷ್ಟು ದಿನ ಮಾತ್ರ ಮಾನವ ಬದುಕಲು ಸಾಧ್ಯ. ಮರಗಳ ಉಸಿರಾಟ ನಿಂತರೆ ಮಾನವನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ ಪ್ರತಿಯೊಬ್ಬರು ಉದ್ಯಾನವನ, ಶಾಲೆ ಮತ್ತು ದೇವಸ್ಥಾನದ ಆವರಣಗಳಲ್ಲಿ ಗಿಡಮರಗಳನ್ನು ನೆಟ್ಟು ಅವುಗಳನ್ನು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಡಾಲರ್ಸ್ ಕಾಲೋನಿಯ ಉದ್ಯಾನದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗತ್ತಿನಲ್ಲಿ ಕನಿಷ್ಠ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಶೇ.20ರಷ್ಟು ಮಾತ್ರ ಉಳಿದಿದೆ. ಇರುವ ಅರಣ್ಯವನ್ನೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿರುವುದರಿಂದ ಮಾಲಿನ್ಯ ಮಿತಿಮೀರುತ್ತಿದೆ. ಓಝೋನ್ ಪದರ ಹಾನಿಗೊಳಗಾಗಿ ನಾನಾ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರೂ ಗಿಡ ನೆಟ್ಟು ಮರಗಳಾಗಿ ಬೆಳೆಸಬೇಕು ಎಂದು ಕರೆ ನೀಡಿದರು.

ಪರಿಸರ ಉಳಿಸಿ ಬೆಳೆಸಿ, ಹಸಿರೇ ನಮ್ಮ ಉಸಿರು’ ಎಂಬ ಘೋಷ ವಾಕ್ಯದೊಂದಿಗೆ ರೋಟರಿ ಸಂಸ್ಥೆ ಮತ್ತು ಇನ್ನರ್‌ವ್ಹೀಲ್ ಸದಸ್ಯರಿಂದ ಪ್ರತಿ ವರ್ಷ ಪರಿಸರ ಸಂರಕ್ಷಣೆಯ ಜೊತೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ.ಸಿದ್ದು ಸಂಕ್ರಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೈಗಾರಿಕೆ ಮತ್ತು ಅತಿಯಾದ ವಾಹನಗಳ ಬಳಕೆಯಿಂದ ರಾಸಾಯನಿಕಯುಕ್ತ ಗಾಳಿ ಉಸಿರಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟಲು ಪ್ರತಿಯೊಂದು ಗ್ರಾಮದಲ್ಲಿ, ಮನೆಗಳ ಸುತ್ತಮುತ್ತ ಮನುಷ್ಯನಿಗೊಂದು ಸಸಿ ನೆಟ್ಟು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಳುವಳಿಯಾಗಿ ನೀಡಬೇಕಾಗಿದೆ. ಅದಕ್ಕಾಗಿ ರೋಟರಿ ಸಂಸ್ಥೆಯಿಂದ ಉದ್ಯಾನ, ಶಾಲೆ ಮತ್ತು ದೇವಸ್ಥಾನಗಳ ಆವರಣದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸುವ ಸಂಕಲ್ಪ ಹೊಂದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಡಾಲರ್ಸ್ ಕಾಲೋನಿಯ ಉದ್ಯಾನವನ್ನು ಚೆನ್ನಾಗಿ ಅಭಿವೃದ್ಧಿಪಡಿಸಲು ಶ್ರಮಿಸಿದ ಅಥಣಿ ಸೋಷಿಯಲ್ ಫೌಂಡೇಶನ್ ಅಧ್ಯಕ್ಷ ಗಜಾನನ ಮಂಗಸೂಳಿ, ಕಾರ್ಯದರ್ಶಿ ಅರುಣ ಸೌದಾಗರ, ಖಜಾಂಚಿ ಅರುಣ ಯಲಗುದ್ರಿ, ಪಿಡಿಒ ಬೀರಪ್ಪ ಕಡಗಂಚಿ, ರಾವಸಾಬ ಐಹೊಳೆ, ಬಸವರಾಜ ಚೌಗುಲೆ, ಸಚಿನ್‌ ದೇಸಾಯಿ, ಅರುಣ ಸೌದಾಗರ, ಡಾ.ಸಿದ್ದು ಸoಕ್ರಟ್ಟಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ರೋಟರಿ ಕಾರ್ಯದರ್ಶಿ ಸೋಮು ವಾಂಗಿ, ಖಜಾಂಚಿ ಪ್ರಫುಲ್ ಪಡನಾಡ, ಶೇಖರ ಕೋಲಾರ, ರಮೇಶ ಬುಲಬುಲೆ, ಅಶೋಕ ಹೊಸೂರು, ಡಾ.ಆನಂದ ಕುಲಕರ್ಣಿ, ಬಾಹುಬಲಿ ಅಸ್ಕಿ, ಡಾ.ಆನಂದ ಗುಂಜಿಗಾವಿ, ಅವಿನಾಶ ಜಾಧವ, ರೋಟರಿ ಇನ್ನರ್ ವ್ಹಿಲ್ ಅಧ್ಯಕ್ಷ ಡಾ.ಮನಿಷಾ ಸಂಕ್ರಟ್ಟಿ, ಕವಿತಾ ವಾಂಗಿ, ಅಕ್ಷತಾ ಪಡನಾಡ, ಮಧು ಮಂಗಸೂಳಿ ಸೇರಿದಂತೆ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹಿಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಡಾ. ಸಿದ್ದು ಸಂಕ್ರಟ್ಟಿ ಸ್ವಾಗತಿಸಿದರು, ಶ್ರೀಕಾಂತ್ ಅಥಣಿ ನಿರೂಪಿಸಿದರು, ಸಚಿನ್ ದೇಸಾಯಿ ವಂದಿಸಿದರು.