ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದ, 20 ಲಕ್ಷ ರು. ಹಣವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಗೆ 2,49,032 ಫಲಾನುಭವಿಗಳ ಖಾತೆಗೆ 30 ಕಂತುಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1,527 ಕೋಟಿ ರು. ಡಿಬಿಟಿ ಮೂಲಕ ಜಮೆಯಾಗಿದ್ದು, ಮರಣ ಹೊಂದಿದ 4556 ಫಲಾನುಭವಿಗಳ ಖಾತೆಗೆ ಜಮೆಯಾದ ಧನಸಹಾಯವನ್ನು ಸರ್ಕಾರಕ್ಕೆ ಹಿಂಪಡೆಯಲು ಬ್ಯಾಂಕ್‌ಗಳಿಗೆ ಡಿಬಿಟಿ ಲಾಗಿನ್ ಒದಗಿಸಲಾಗಿದ್ದು, ಬ್ಯಾಂಕ್‌ನವರು ಸರ್ಕಾರದ ಖಾತೆಗೆ ಮರಣ ಹೊಂದಿದ ಫಲಾನುಭವಿಗಳಿಗೆ ಜಮೆಯಾದ ಧನಸಹಾಯ ಮೊತ್ತ ಹಿಂಪಡೆಯಲು ಕ್ರಮ ವಹಿಸುತ್ತಿದ್ದಾರೆ. ಈಗಾಗಲೇ 1015 ಫಲಾನುಭವಿಗಳಿಂದ 20,29,023 ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಿಕೊಳ್ಳಲಾಗಿದೆ ಎಂದರು.ಅನ್ನಭಾಗ್ಯ ಯೋಜನೆಯಡಿ ಜೂನ್ ೨೦೨೬ ಮಾಹೆಗೆ ೨,೪೬,೫೭೫ ಪಡಿತರ ಚೀಟಿಗಳ ೮,೨೩,೬೯೨ ಸದಸ್ಯರಿಗೆ ೧,೧೧,೭೮೦ ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಗಿದ್ದು, ಇದಕ್ಕಾಗಿ ೩೩,೮೫ ಕೋಟಿ ವೆಚ್ಚವಾಗಿದೆ. ಶಕ್ತಿ ಯೋಜನೆಯಡಿ ಜೂನ್ ಅಂತ್ಯದವರೆಗೆ ೬,೯೫,೨೦,೬೫೯ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ೨೭೩ ಕೋಟಿ ರೂ. ಆದಾಯ ಬಂದಿದೆ. ಯುವನಿಧಿ ಯೋಜನೆಯಡಿ ೬೧೧೯ ಪದವಿ, ೮೩ ಡಿಪ್ಲೊಮಾ ಪದವೀಧರಿಗೆ ೧೬.೮೨ ಕೋಟಿ ರು. ಪಾವತಿಸಲಾಗಿದೆ ಎಂದರು.
ಮೆಸ್ಕಾಂ ಅಧೀಕ್ಷಕ ಅಭಿಯಂತರ ಮಂಜುನಾಥ್ ಮಾತನಾಡಿ, ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಗ್ರಾಹಕರು ತಮ್ಮ ಮನೆಗಳಿಗೆ ಬರುವ ಮೀಟರ್ ರೀಡರ್‌ಗಳಿಗೆ ಆರ್.ಆರ್. ಸಂಖ್ಯೆಯನ್ನು ಪರಿಷ್ಕರಣೆಯ ಆಪ್‌ಗೆ ಜೋಡಿಸಿದೊಡನೆ ಗ್ರಾಹಕರ ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿದ ಬಳಿಕ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕಿದ್ದು, ಅದಕ್ಕೂ ಒಟಿಪಿ ಬರಲಿದೆ. ಅವರು ಬಾಡಿಗೆದಾರರಾಗಿದ್ದಲ್ಲಿ ಬಾಡಿಗೆ ಕರಾರು ಪತ್ರವನ್ನು ನೀಡಬೇಕು. ಒಂದೊಮ್ಮೆ ಬಾಡಿಗೆ ಕರಾರು ಪತ್ರ ಇಲ್ಲದಿದ್ದಲ್ಲಿ ಇಲಾಖೆಯವರೇ ಕೊಡುವ ಕರಾರು ಪತ್ರಕ್ಕೆ ಕಟ್ಟಡದ ಮಾಲೀಕರು ಮತ್ತು ಬಾಡಿಗೆದಾರರು ಸಹಿ ಹಾಕಿ ಕೊಡಬೇಕು. ಕರ್ನಾಟಕದ ನಿವಾಸಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತಿರುವುದರಿಂದ ಓಟರ್ ಐಡಿಯ ಸಂಖ್ಯೆಯನ್ನು ತಿಳಿಸಬೇಕು ಎಂದರು.
ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಸಂಖ್ಯೆಯನ್ನು ತಿಳಿಸಿದ ನಂತರ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುತ್ತದೆ. ಈ ಎಲ್ಲಾ ದಾಖಲೆಗಳನ್ನು ಫಲಾನುಭವಿಗಳು ಮೊದಲೇ ಜೋಡಿಸಿಕೊಂಡಿದ್ದಲ್ಲಿ ತ್ವರಿತಗತಿಯಲ್ಲಿ ಪರಿಷ್ಕರಣೆ ಕಾರ್ಯ ಆಗಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು, ಮೀಟರ್ ರೀಡರ್‌ಗಳು ಮತ್ತು ಗ್ಯಾರಂಟಿ ಸಮಿತಿಯ ಸದಸ್ಯರು ಕಾರ್ಯಾಗಾರ ನಡೆಸಿ ಗ್ರಾಹಕರಿಗೆ ದಾಖಲಾತಿಗಳನ್ನು ಹೊಂದಿಸಿಟ್ಟುಕೊಳ್ಳುವ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ೧,೩೧,೦೦೦ ಆರ್.ಆರ್. ಸಂಖ್ಯೆಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಪ್ರಾಧಿಕಾರದ ಉಪಾಧ್ಯಕ್ಷರು, ಎಲ್ಲಾ ತಾಲೂಕುಗಳ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ಜಿಪಂ ಯೋಜನಾಧಿಕಾರಿ ರಾಜಗೋಪಾಲ್, ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಜರಿದ್ದರು.88 ಕ್ಲಸ್ಟರ್‌ಗಳಲ್ಲಿ ಸಸಿ ನೆಡುವ ಕಾರ್ಯಕ್ರಮ
ಗೃಹಲಕ್ಷ್ಮಿ ಯೋಜನೆ ೨೦೨೩ರ ಜು.೧೯ರಿಂದ ನೋಂದಣಿ ಕಾರ್ಯ ಪ್ರಾರಂಭವಾಗಿ ೨೦೨೬ ಜು.೧೯ಕ್ಕೆ ಮೂರು ವರ್ಷ ಪೂರ್ಣಗೊಂಡಿರುವುದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ೮೮ ಕ್ಲಸ್ಟರ್‌ಗಳ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣ ಹಾಗೂ ಪ್ರಮುಖ ಸ್ಥಳಗಳಲ್ಲಿ ವಿವಿಧ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯ ಫಲಾನುಭವಿ ತಾಯಂದಿರಿಂದ ಸಸಿಗಳನ್ನು ನೆಡಿಸಲಾಗುವುದು ಎಂದು ಶಿವಾನಂದ ಸ್ವಾಮಿ ತಿಳಿಸಿದರು.