ಮೈಸೂರಿನ ಐವರು ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಸಂತಸದ ಸಂಗತಿ. ಮೈಸೂರು ಪತ್ರಿಕೋದ್ಯಮ ಮತ್ತು ಪತ್ರಕರ್ತರಿಗೆ ಹೆಚ್ಚಿನ ಗೌರವವಿದೆ. ಪ್ರಶಸ್ತಿ ಪಡೆದ ಪತ್ರಕರ್ತರನ್ನು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಮೈಸೂರಿನ ನಾಲ್ವರು ಪತ್ರಕರ್ತರನ್ನು ಜಿಎಸ್‌ಎಸ್ ಸಮೂಹ ಸಂಸ್ಥೆಗಳ ವತಿಯಿಂದ ಶುಕ್ರವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.ಕುವೆಂಪುನಗರದಲ್ಲಿರುವ ಜಿಎಸ್‌ಎಸ್‌ಸಮೂಹ ಸಂಸ್ಥೆಗಳ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜಕೀಯ ವಿಮರ್ಶೆಗೆ (ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆದ ದಯಾಶಂಕರ ಮೈಲಿ (ಸುದ್ದಿಮೂಲ), ಅತ್ಯುತ್ತಮ ಅಪರಾಧ ವರದಿಗೆ ಗಿರಿಧರ್ ಪ್ರಶಸ್ತಿ ಪಡೆದ ಪಿ.ಕೆ. ರವಿಕುಮಾರ್ (ವಿಜಯವಾಣಿ), ವನ್ಯ ಪ್ರಾಣಿಗಳ ವರದಿಗೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಪಡೆದ ನಾಗರಾಜ್ ನವೀಮನೆ (ವಿಜಯ ಕರ್ನಾಟಕ) ಹಾಗೂ ಅತ್ಯುತ್ತಮ ಪುಟ ವಿನ್ಯಾಸಗಾರ ಪ್ರಶಸ್ತಿ ಪಡೆದ ಸಂದೇಶ್ (ಪ್ರತಿನಿಧಿ) ಅವರನ್ನು ಅಭಿನಂದಿಸಲಾಯಿತು.
ಮೈಸೂರಿನ ಐವರು ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಸಂತಸದ ಸಂಗತಿ. ಮೈಸೂರು ಪತ್ರಿಕೋದ್ಯಮ ಮತ್ತು ಪತ್ರಕರ್ತರಿಗೆ ಹೆಚ್ಚಿನ ಗೌರವವಿದೆ. ಪ್ರಶಸ್ತಿ ಪಡೆದ ಪತ್ರಕರ್ತರನ್ನು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿದೆ. ಈ ಎಲ್ಲ ಪತ್ರಕರ್ತರು, ಅವರ ಸಾಧನೆಗಳ ಮಾಹಿತಿ ನೀಡುವ ವೆಬ್‌ಸೈಟ್‌ಆರಂಭವಿಸುವ ಚಿಂತನೆ ಇದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಜಿಎಸ್‌ಎಸ್‌ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಹೇಳಿದರು.ಪ್ರಸ್ತುತ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವುದು ಅತಿ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವ ಮೂಲಕ ಶ್ರೀಹರಿ ಅವರು ನಿಜ ನಾಯಕರಾಗಿದ್ದಾರೆ. ಪ್ರತಿಬಾರಿಯೂ ಪತ್ರಕರ್ತರ ಏಳಿಗೆ, ಪತ್ರಕರ್ತರ ಸಂಘದ ಶ್ರೇಯೋಭಿವೃದ್ದಿಯ ಚಿಂತನೆ, ಆರೋಗ್ಯದ ಬಗ್ಗೆಯೂ ಶ್ರೀಹರಿ ಅವರು ಕಾಳಜಿ ಹೊಂದಿರುವುದು ಸಂತಸದ ಸಂಗತಿ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪತ್ರಕರ್ತರು ಸದಾಕಾಲವೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಸನ್ಮಾನಿಸಿರುವುದು ನಮಗೆ ನಾವೇ ಗೌರವಿಸಿಕೊಂಡಂತೆ. ಇಂತಹ ಸೌಹಾರ್ದಯುತ ವಾತಾವರಣವನ್ನು ಶ್ರೀಹರಿ ಅವರು ಕಲ್ಪಿಸಿಕೊಟ್ಟಿದ್ದಾರೆ. ಈ ಹಿಂದೆಯೂ ಜಿಲ್ಲಾ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭದಲ್ಲೂ ಪ್ರಶಸ್ತಿ ಪುರಸ್ಕೃತರನ್ನು ಶ್ರೀಹರಿ ಅವರು ಗೌರವಿಸಿದ್ದರು. ದಿನನಿತ್ಯವೂ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಈ ರೀತಿಯಾಗಿ ಸೌಹಾರ್ದಯುತವಾಗಿ ಸೇರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್, ಸಿ.ಕೆ.ಮಹೇಂದ್ರ, ಹಿರಿಯ ಪತ್ರಕರ್ತರಾದ ಕೆ. ನರಸಿಂಹಮೂರ್ತಿ, ಐತಿಚಂಡ ರಮೇಶ್ ಉತ್ತಪ್ಪ, ಎಂ.ಆರ್. ಸತ್ಯನಾರಾಯಣ, ರಾಮ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿದರು. ಉಪಾಧ್ಯಕ್ಷ ರವಿ ಪಾಂಡವಪುರ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ. ರಾಘವೇಂದ್ರ, ಸೋಮಶೇಖರ್ ಚಿಕ್ಕಮರಳಿ, ಬಸವರಾಜ್, ಆನಂದ್, ಸಿ. ದಿನೇಶ್ ಇದ್ದರು.