ಜನತೆಗೆ ಆರ್ಥಿಕ ಚೈತನ್ಯ ನೀಡಿದ ಜಿಎಸ್‌ಟಿ

| Published : Sep 24 2025, 01:00 AM IST

ಸಾರಾಂಶ

ಯುಪಿಎ ಅವಧಿಯಲ್ಲಿ ಎಲ್ಲ ಸರಕು, ಸೇವೆಗಳ ಮೇಲೆ ಶೇ.30 ರಷ್ಟು ತೆರಿಗೆ ಇತ್ತು. ಮೋದಿ ಸರ್ಕಾರ ಮೊದಲಿಗೆ ನಾಲ್ಕು ಹಂತಗಳಲ್ಲಿ ತೆರಿಗೆ ತಂದು ಈಗ ಎರಡು ಹಂತಗಳನ್ನು ಉಳಿಸಿಕೊಂಡಿದೆ. ಈ ಸುಧಾರಣೆಯಿಂದ ಎರಡೂವರೆ ಲಕ್ಷ ಕೋಟಿ ರು. ಜನರ ಕೈಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಖರೀದಿ ಸಾಮರ್ಥ್ಯ ಹೆಚ್ಚಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರಾಜ್ಯಗಳ ಗಮನಕ್ಕೆ ತಂದೇ ಜಿಎಸ್‌ಟಿ ಸುಧಾರಣೆ ತಂದಿದೆ. ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ನಗರದ ಸಂಸದರ ಗೃಹಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯದಶಮಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿಯನ್ನು ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ. ಶೇ.18 ರ ತೆರಿಗೆಯನ್ನು ಶೇ.5 ಕ್ಕೆ ತಂದಿದ್ದಾರೆ ಎಂದರು.

ಟ್ರ್ಯಾಕ್ಟರ್‌, ಗೊಬ್ಬರ ದರ ಇಳಿಕೆ

ತಾವೂ ಸಹ ಆರ್ಥಿಕ ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದಿರಲಿಲ್ಲ. ಮಧ್ಯಮವರ್ಗ ಹಾಗೂ ಬಡಜನರ ಪರವಾಗಿ ನಾನು ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ. ರೈತರು ಬಳಕೆ ಮಾಡುವ ಟ್ರ್ಯಾಕ್ಟರ್‌, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳ ತೆರಿಗೆಯನ್ನು ಶೇ.5 ರ ವ್ಯಾಪ್ತಿಗೆ ತರಲಾಗಿದೆ ಎಂದರು.

ಯುಪಿಎ ಅವಧಿಯಲ್ಲಿ ಎಲ್ಲ ಸರಕು, ಸೇವೆಗಳ ಮೇಲೆ ಶೇ.30 ರಷ್ಟು ತೆರಿಗೆ ಇತ್ತು. ಮೋದಿ ಸರ್ಕಾರ ಮೊದಲಿಗೆ ನಾಲ್ಕು ಹಂತಗಳಲ್ಲಿ ತೆರಿಗೆ ತಂದು ಈಗ ಎರಡು ಹಂತಗಳನ್ನು ಉಳಿಸಿಕೊಂಡಿದೆ. ಈ ಸುಧಾರಣೆಯಿಂದ ಎರಡೂವರೆ ಲಕ್ಷ ಕೋಟಿ ರು. ಜನರ ಕೈಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಖರೀದಿ ಸಾಮರ್ಥ್ಯ ಹೆಚ್ಚಲಿದೆ. ಯುಪಿಎಗೆ ಹೋಲಿಸಿದರೆ ಎನ್‌ಡಿಎ ಸರ್ಕಾರ ರಕ್ಷಣಾ ವಲಯಕ್ಕೆ 34 ಪಟ್ಟು ಅಧಿಕ ಅನುದಾನ ನೀಡಿದೆ. ಯುಪಿಎ ಅವಧಿಯಲ್ಲಿ ಹಾಲಿನ ಉತ್ಪನ್ನಗಳಿಗೆ ಶೇ.18 ತೆರಿಗೆ ಇತ್ತು. ಎನ್‌ಡಿಎ ಸರ್ಕಾರ ಹಾಲಿಗೆ ತೆರಿಗೆ ತೆಗೆದುಹಾಕಿದೆ.ಕಾಂಗ್ರೆಸ್‌ನ ಗ್ಯಾರಂಟಿ ಸುಲಿಗೆ ಟ್ಯಾಕ್ಸ್‌ ಕಾಂಗ್ರೆಸ್‌ ಸರ್ಕಾರಕ್ಕೆ ಜಿಎಸ್‌ಟಿ ಎಂದರೆ ಗ್ಯಾರಂಟಿ ಸುಲಿಗೆ ಟ್ಯಾಕ್ಸ್‌. 38 ರೂ. ಇದ್ದ ಹಾಲಿಗೆ 47 ರೂ. ಆಗಿದೆ. ಬಸ್‌ ದರ 100 ಕಿ.ಮೀ.ಗೆ ರೂ 100 ಇದ್ದಿದ್ದು, 115 ರೂ. ಆಗಿದೆ. ಪೆಟ್ರೋಲ್‌ಗೆ 99 ರೂ. ಇದ್ದಿದ್ದು, 103 ರೂ. ಆಗಿದೆ. ಡೀಸೆಲ್‌ಗೆ ಶೇ8 ರಷ್ಟು ದರ ಹೆಚ್ಚಿದೆ. ನೀರಿನ ಶುಲ್ಕ ಶೇ 55ರಷ್ಟು ಹೆಚ್ಚಾಗಿದೆ. ವಿದ್ಯುತ್‌ ದರ 120 ರೂ. ನಿಂದ 145 ರೂ.ಗೆ ಏರಿದೆ. ಸ್ಟಾಂಪ್‌ ಡ್ಯೂಟಿ ಶೇ 150 ರಷ್ಟು ಹೆಚ್ಚಿದೆ. ಅಫಿಡವಿಟ್‌ಗೆ 20 ರೂ. ನಿಂದ 100 ರೂ.ಗೆ ಏರಿಸಲಾಗಿದೆ. ಬಿಬಿಎಂಪಿಯಲ್ಲಿ ಕಸಕ್ಕೆ ಹೊಸದಾಗಿ 400 ರೂ. ಶುಲ್ಕ ವಿಧಿಸಲಾಗಿದೆ. ಹೊಸ ವಾಹನಗಳ ನೋಂದಣಿಗೆ 500 ರೂ. ನಿಂದ 1,000 ರೂ. ಹೆಚ್ಚಿದೆ. ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು 100 ರಿಂದ 500 ರೂ. ಗೆ ಏರಿಸಲಾಗಿದೆ ಎಂದು ದೂರಿದರು.ರಾಜ್ಯದ ಸಚಿವರಿಂದ ಸಹಿ:ತೆರಿಗೆ ಇಳಿಕೆ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಈಗ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ಪರವಾಗಿ ಸಚಿವ ಕೃಷ್ಣ ಭೈರೇಗೌಡರು ಇದಕ್ಕೆ ಸಹಿ ಹಾಕಿದ್ದಾರೆ. ಸರಿ ಇಲ್ಲ ಎಂದಮೇಲೆ ಸಹಿ ಹಾಕಿದ್ದು ಏಕೆ, ಕೇಂದ್ರ ಸರ್ಕಾರಕ್ಕೆ ಆದಾಯ ಕಡಿಮೆಯಾದರೂ ಜನರ ಹಿತದೃಷ್ಟಿಯಿಂದ ಈ ಕ್ರಮ ತರಲಾಗಿದೆ. ಈಗಾಗಲೇ ಜನರಿಗೆ ಜಿಎಸ್‌ಟಿಯ ಲಾಭ ದೊರೆತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾದಿಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ,ಮಾಜಿ ಶಾಸಕ ಎಂ.ರಾಜಣ್ಣ, ತಾಪಂ ಮಾಜಿ ಅಧ್ಯಕ್ಷರಾದ ಚಿಕ್ಕಗರಿಗರೆಡ್ಡಿ,ಬಿ.ಎಂ.ರಾಮಸ್ವಾಮಿ. ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ,ಮಾಜಿ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ಮತ್ತಿತರರು ಇದ್ದರು.