ಸಾರಾಂಶ
ಬೆಂಗಳೂರು : ಯುಪಿಐ ಬದಲು ನಗದು ರೂಪದಲ್ಲೇ ಹಣ ಸ್ವೀಕಾರ ಮಾಡಿದರೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ವರ್ತಕರಿಗೆ ಎಚ್ಚರಿಕೆ ನೀಡಿದೆ.
ಜಿಎಸ್ಟಿ ನೋಂದಣಿ ಮಾಡಿಕೊಳ್ಳದೇ ಜಿಎಸ್ಟಿ ವಿನಾಯಿತಿ ಮಿತಿ ಮೀರಿ ವ್ಯಾಪಾರ ಮಾಡಿರುವ 5,500ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಇಲಾಖೆಯಿಂದ ನೋಟಿಸ್ ನೀಡಿದ ಬೆನ್ನಲ್ಲೇ ಕೆಲ ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ವರ್ತಕರು ತಾವು ಮಾಡಿದ ವ್ಯಾಪಾರಕ್ಕೆ ‘ಯುಪಿಐ’ ಮೂಲಕ ಹಣ ಸ್ವೀಕರಿಸುವುದು ಒಂದು ಮಾರ್ಗ ಮಾತ್ರ. ಹೀಗಾಗಿ, ಯುಪಿಐ, ಕಾರ್ಡ್, ನಗದು ಸೇರಿದಂತೆ ಯಾವುದೇ ರೂಪದಲ್ಲಿ ಹಣ ಸ್ವೀಕರಿಸಿದರೂ ಜಿಎಸ್ಟಿ ಕಾಯ್ದೆ ಅನ್ವಯಿಸುತ್ತದೆ ಎಂದು ತಿಳಿಸಿದೆ.
ಅಂತಹ ವ್ಯಾಪಾರಿಗಳಿಂದ ತೆರಿಗೆ ಸಂಗ್ರಹಿಸಲು ಇಲಾಖೆ ಕ್ರಮ ತೆಗೆದುಕೊಳ್ಳತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ. ಈ ಮೂಲಕ ಕ್ಯೂಆರ್ ಕೋಡ್‌ಗಳನ್ನು ಕಿತ್ತು ಹಾಕಿ ಗ್ರಾಹಕರಿಂದ ನಗದು ರೂಪದಲ್ಲಿ ಹಣ ಕೇಳುತ್ತಿರುವ ವ್ಯಾಪಾರಿಗಳಿಗೆ ತೆರಿಗೆ ಇಲಾಖೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.
ಪರಿಹಾರ ಕ್ರಮಗಳಿವೆ, ಬಳಸಿಕೊಳ್ಳಿ:
ನೋಟಿಸ್ ಸ್ವೀಕರಿಸಿರುವ ವರ್ತಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ಯಾವ ಕಚೇರಿಯಿಂದ ನೋಟಿಸ್ ಬಂದಿದೆಯೋ ಆ ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಜಿಎಸ್ಟಿ ನಿಯಮಗಳು ಮತ್ತು ಅದಕ್ಕೆ ಪರಿಹಾರಗಳನ್ನು ತಿಳಿಸುತ್ತಾರೆ. ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ, ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳನ್ವಯ ತೆರಿಗೆ ವಿಧಿಸುತ್ತಾರೆ. ವರ್ತಕರಿಗೆ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಸೂಚಿಸಲಾಗಿದೆ. ಯಾವುದೇ ರೀತಿ ತೊಂದರೆಯಾಗದಂತೆ ಹೊಸ ನೋಂದಣಿ ಮಾಡಿಕೊಡಲು ಸೂಚಿಸಲಾಗಿದೆ.
ಜಿಎಸ್ಟಿ ನೋಂದಣಿ ಕಡ್ಡಾಯ:
ಒಂದು ಹಣಕಾಸು ವರ್ಷದಲ್ಲಿ ಸರಕುಗಳ ಪೂರೈಕೆ ಮಾಡುವ ವ್ಯಾಪಾರಿಗಳು 40 ಲಕ್ಷ ರು. ಹಾಗೂ ಸೇವೆಗಳ ಪೂರೈಕೆ ಮಾಡುವ ವ್ಯಾಪಾರಿಗಳು 20 ಲಕ್ಷ ರು. ಮೇಲ್ಪಟ್ಟು ವ್ಯಾಪಾರ ಮಾಡಿದರೆ ಜಿಎಸ್ಟಿ ನೋಂದಣಿ ಕಡ್ಡಾಯವಿದೆ. ಅದರಲ್ಲೂ ತೆರಿಗೆ ವಿನಾಯಿತಿ ಇರುವ ಮತ್ತು ತೆರಿಗೆ ಇರುವ ಸರಕುಗಳು ಇರುತ್ತವೆ. ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲಿನ ಹೂಡುವಳಿ (ಇನ್‌ಪುಟ್ ಟ್ಯಾಕ್ಸ್) ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ನಿವ್ವಳ ತೆರಿಗೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಅಲ್ಪ ಪ್ರಮಾಣದಲ್ಲಿ ಇರುತ್ತದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ರಾಜಿ ತೆರಿಗೆ ಪದ್ಧತಿಯಡಿ 98,915 ನೋಂದಣಿ
ರಾಜ್ಯದಲ್ಲಿ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ (ಕಾಂಪೋಸಿಷನ್ ಸ್ಕೀಂ) ನೋಂದಣಿ ಮಾಡಿಕೊಂಡು ತೆರಿಗೆ ಪಾವತಿಸುತ್ತಿದ್ದಾರೆ. ಯೋಜನೆಯಡಿ ನೋಂದಣಿ ಮಾಡಿಕೊಂಡು ವಾರ್ಷಿಕ ವಹಿವಾಟಿನ ಶೇ.1ರಷ್ಟು ತೆರಿಗೆ ವರ್ತಕರು ಪಾವತಿಸಬೇಕು. ಇದು 1.5 ಕೋಟಿ. ರು. ಒಳಗಿನ ವ್ಯಾಪಾರಗಳಿಗೆ ಅನ್ವಯವಾಗುತ್ತದೆ. ಆದರೆ, ನೋಂದಣಿ ಮಾಡಿಕೊಳ್ಳದ ವ್ಯಾಪಾರಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಇನ್ನು ನೋಟಿಸ್ ಸ್ವೀಕರಿಸಿರುವ ಸಣ್ಣ ವ್ಯಾಪಾರಿಗಳು ನೋಂದಣಿ ಮಾಡಿಕೊಂಡರೆ, ತಮ್ಮ ವಹಿವಾಟಿನ ಶೇ.1ರಷ್ಟು ತೆರಿಗೆ ಪಾವತಿಸುವುದು ಕಷ್ಟವಾಗುವುದಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳಿದೆ.
ಜಿಎಸ್‌ಟಿ ನೋಂದಣಿಮಾಡಿಸ್ತೀವಿ, ಹಳೇ ಲೆಕ್ಕ ಕೇಳಬೇಡಿ: ವರ್ತಕರು
ಹಿಂದಿನ ವರ್ಷಗಳಲ್ಲಿ ಆಗಿರುವ ವಹಿವಾಟಿನ ದಾಖಲೆಗಳನ್ನು ವ್ಯಾಪಾರಿಗಳು ಇಟ್ಟುಕೊಂಡಿಲ್ಲವಾದ ಕಾರಣ ಹಳೇ ಲೆಕ್ಕ ಕೇಳಬೇಡಿ. ಹೊಸದಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುತ್ತೇವೆ ಎಂದು ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಿರುವ ವ್ಯಾಪಾರಿಗಳು ತೆರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.--ಅನುಮಾನ ಇದೆಯಾ?ಹೆಲ್ಪ್‌ಲೈನ್ ಸಂಪರ್ಕಿಸಿಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಬಂಧಿಸಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಅನುಮಾನಗಳು ಇದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1800 425 6300ಕ್ಕೆ ಸಂಪರ್ಕಿಸಬಹುದು ಎಂದು ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆ ತಿಳಿಸಿದೆ. ಈ ಜಿಲ್ಲಾ ಕೇಂದ್ರಗಳಲ್ಲಿ ಇರುವ ಕಚೇರಿಗಳಿಗೂ ಭೇಟಿ ನೀಡಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.