ಜೀವ ವಿಮೆ, ಆರೋಗ್ಯ ವಿಮೆ ಪ್ರೀಮಿಯಂನ ಜಿ.ಎಸ್.ಟಿ. ರದ್ದುಗೊಳಿಸಲು ಆಗ್ರಹ

| Published : Jul 10 2024, 12:32 AM IST

ಜೀವ ವಿಮೆ, ಆರೋಗ್ಯ ವಿಮೆ ಪ್ರೀಮಿಯಂನ ಜಿ.ಎಸ್.ಟಿ. ರದ್ದುಗೊಳಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲೆ ಶೇ.೧೮ ಜಿ.ಎಸ್.ಟಿ.ಯನ್ನು ಹೇರುವುದರಿಂದ ಜನಸಾಮಾನ್ಯರಿಗೆ ವಿಮಾ ಕಂತು ಸಂದಾಯ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಈ ಜಿ.ಎಸ್.ಟಿ. ಯನ್ನು ರದ್ದುಗೊಳಿಸಬೇಕು ಎಂದು ಅಖಿಲ ಭಾರತ ವಿಮಾ ನೌಕರರ ಸಂಘ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತ ವಿಮಾ ನೌಕರರ ಸಂಘದ ನೇತೃತ್ವದಲ್ಲಿ ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿ.ಯನ್ನು ರದ್ದುಗೊಳಿಸಬೇಕು, ಜೀವ ವಿಮೆಯ ಉಳಿತಾಯಕ್ಕೆ ಕರ ವಿನಾಯಿತಿಯನ್ನು ಪುನಃ ಸ್ಥಾಪಿಸಬೇಕು ಮತ್ತು ಸಾರ್ವಜನಿಕ ರಂಗದ ನಾಲ್ಕು ಸಾಮಾನ್ಯ ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸಬೇಕೆಂದು ಆಗ್ರಹಿಸಿ ವಿಮಾ ನೌಕರರ ಸಂಘ ಉಡುಪಿ ವಿಭಾಗದ ನಿಯೋಗವು ಮಂಗಳವಾರ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿತು.

ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲೆ ಶೇ.೧೮ ಜಿ.ಎಸ್.ಟಿ.ಯನ್ನು ಹೇರುವುದರಿಂದ ಜನಸಾಮಾನ್ಯರಿಗೆ ವಿಮಾ ಕಂತು ಸಂದಾಯ ಮಾಡುವುದು ಕಷ್ಟವಾಗುತ್ತಿದೆ. ಜನರು ತಮ್ಮ ಕುಟುಂಬದ ರಕ್ಷಣೆಗಾಗಿ ತಮ್ಮ ಜೀವ ವಿಮೆ ಮಾಡಿರುವಾಗ ಆ ವಿಮಾ ಕಂತಿನ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ, ಆದ್ದರಿಂದ ಈ ಜಿ.ಎಸ್.ಟಿ. ಯನ್ನು ರದ್ದುಗೊಳಿಸಬೇಕು.

ಜೀವ ವಿಮಾ ಉದ್ದಿಮೆಯು ಜನರ ಉಳಿತಾಯದ ಆಧಾರದ ಮೇಲೆ ನಿಂತಿದೆ. ಹಿಂದೆ ಸೆಕ್ಷನ್ ೮೦ಸಿ ಯಲ್ಲಿ ಉಳಿತಾಯ ಮಾಡುವವರಿಗೆ ಕರ ರಿಯಾಯಿತಿ ದೊರೆಯುತಿತ್ತು. ಅದನ್ನು ಈಗ ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಲ್ಲದೇ ರದ್ದುಪಡಿಸಲಾದ ಆರೋಗ್ಯ ವಿಮಾ ಕಂತಿಗೆ 80 ಡಿ ಅಡಿ ಆದಾಯ ಕರ ರಿಯಾಯಿತಿಯನ್ನು ಮತ್ತೆ ಪುನಃ ಸ್ಥಾಪಿಸಬೇಕೆಂದು ಒತ್ತಾಯಿಸಲಾಗಿದೆ.

ಸಾರ್ವಜನಿಕ ರಂಗದ ನಾಲ್ಕು ಸಾಮಾನ್ಯ ವಿಮಾ ಸಂಸ್ಥೆಗಳು ಇಂದು ಮಾರುಕಟ್ಟೆಯ ಶೇ.೩೦ ಪಾಲನ್ನು ಹೊಂದಿವೆ. ಈ ಸಂಸ್ಥೆಗಳು ತಮ್ಮಲ್ಲೇ ಸ್ಪರ್ಧೆ ಎದುರಿಸುವ ಜೊತೆಗೆ ಇತರ ಖಾಸಗಿ ವಿಮಾ ಸಂಸ್ಥೆಗಳ ಜೊತೆಗೆ ಕೂಡ ಸ್ಪರ್ಧಿಸಬೇಕಾಗಿದೆ. ಆದ್ದರಿಂದ ಈ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದು ಬೃಹತ್ ಸಂಸ್ಥೆಯಾಗಿ ರೂಪಿಸಬೇಕೆಂದು ಸಂಸದರ ಗಮನ ಸೆಳೆಯಲಾಯಿತು.

ಈ ವಿಷಯಗಳ ಬಗ್ಗೆ ಲೋಕಸಭಾ ಸದಸ್ಯರು ವಿಸ್ತೃತವಾಗಿ ಚರ್ಚಿಸುವ ಮೂಲಕ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.