ಜಿಎಸ್ಟಿ ಇಳಿಕೆ ಇತಿಹಾಸದಲ್ಲೇ ದೊಡ್ಡ ಕ್ರಾಂತಿ: ವಿಶ್ವನಾಥ್‌

| Published : Oct 29 2025, 01:00 AM IST

ಜಿಎಸ್ಟಿ ಇಳಿಕೆ ಇತಿಹಾಸದಲ್ಲೇ ದೊಡ್ಡ ಕ್ರಾಂತಿ: ವಿಶ್ವನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಜಿಎಸ್‌ಟಿ ಇಳಿಕೆ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ತೆರಿಗೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ನಾಗರಿಕ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಹೆಜ್ಜೆಯನ್ನಿಟ್ಟಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ್‌ ಭಟ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಜಿಎಸ್‌ಟಿ ಇಳಿಕೆ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ತೆರಿಗೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ನಾಗರಿಕ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಹೆಜ್ಜೆಯನ್ನಿಟ್ಟಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ್‌ ಭಟ್ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ’ನವ ಪೀಳಿಗೆ ಜಿಎಸ್‌ಟಿ 2.0’ ಸುಧಾರಣೆ ಕುರಿತ ವಿಚಾರ ಸಂಕಿರಣದಲ್ಲಿ ಟಿಪಿಟಿ ಮೂಲಕ ವಿಷಯ ಮಂಡಿಸಿ ಮಾತನಾಡಿದರು.

ಸಾಮಾನ್ಯ ಜನರ ಆಕಾಂಕ್ಷೆಗಳನ್ನು ನನಸುಗೊಳಿಸಲು ಕೇಂದ್ರ ಸರ್ಕಾರ ಶೇ.99 ರಷ್ಟು ಸರಕು ಸಾಗಣಿಕೆ ವೆಚ್ಚದ ತೆರಿಗೆ ಇಳಿಕೆಗೊಳಿಸಿದ್ದು, ಇದು ಬಹುತೇಕ ಫಲಪ್ರದವಾಗಿದೆ. ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ರವರ ಜಿಎಸ್‌ಟಿ ಕ್ರಾಂತಿ ದೊಡ್ಡ ಅಲೆಯನ್ನೇ ಸೃಷ್ಟಿಸಿ ಜನತೆಗೆ ದೀಪಾವಳಿ ಕೊಡುಗೆಯನ್ನು ನೀಡಿದೆ ಎಂದರು.

ಕೇಂದ್ರ ಸರ್ಕಾರ ಜನತೆಯ ಒಳಿತಿಗಾಗಿ ನಾಲ್ಕು ಸ್ಲಾಬ್‌ಗಳಲ್ಲಿ ತೆರಿಗೆ ಇಳಿಕೆ ಮಾಡಿದೆ. ಶೇ. 10, 12 ಮತ್ತು 18 ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಕಡಿತಗೊಳಿಸಿದ ಪರಿಣಾಮ ರಾಷ್ಟ್ರದ 145 ಕೋಟಿ ಜನಸಂಖ್ಯೆಗೆ ಬಹಳಷ್ಟು ಹರ್ಷ ತಂದಿದೆ ಎಂದು ಹೇಳಿದರು.

ಈ ನಡುವೆ ರಾಜ್ಯದ ಮುಖ್ಯಮಂತ್ರಿ ಅಭಿವೃದ್ಧಿ ರಾಷ್ಟ್ರವನ್ನು ಕೊಂಡಾಡುವ ಬದಲು ಮೊಸರಿನಲ್ಲಿ ಕಲ್ಲು ಹುಡುಕಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಪಡೆದುಕೊಂಡರೆ ಸಂತಾನಹರಣವೆಂಬ ಸುಳ್ಳು ವದಂತಿ ಹಬ್ಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಮುಂದಾಗಿದ್ದರು ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಒಂದು ದೇಶ, ಒಂದು ತೆರಿಗೆ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ತೀರ್ಪು ಕೈಗೊಂಡಿದೆ. ಆದರೆ, ರಾಜ್ಯದಲ್ಲಿ ವ್ಯತಿರಿಕ್ತವಾಗಿ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಳಗೊಳಿಸಿ ಅಧಿಕಾರ ನಡೆಸುತ್ತಿದೆ. ದೈನಂದಿನ ವ್ಯವಹಾರ ಹಾಗೂ ಕುಟುಂಬ ನಿರ್ವಹಣೆಗೂ ಜನರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಕೋಟೆ ರಂಗನಾಥ್, ದೀಪಕ್‌ ದೊಡ್ಡಯ್ಯ ಹಾಜರಿದ್ದರು.