ಜಿ.ಟಿ. ಭಟ್ಟರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಆದರ್ಶ: ಡಾ. ಪುರುಷೋತ್ತಮ

| Published : May 21 2024, 12:49 AM IST

ಜಿ.ಟಿ. ಭಟ್ಟರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಆದರ್ಶ: ಡಾ. ಪುರುಷೋತ್ತಮ
Share this Article
  • FB
  • TW
  • Linkdin
  • Email

ಸಾರಾಂಶ

ಮೇ ೧೯ರಂದು ಯಲ್ಲಾಪುರ ತಾಲೂಕಿನ ಮಂಚೀಕೇರಿಯ ರಾ.ರಾ. ರಂಗಮಂದಿರದಲ್ಲಿ ನಿವೃತ್ತ ಶಿಕ್ಷಕ ಮುಖ್ಯಾಧ್ಯಾಪಕ ಜಿ.ಟಿ. ಭಟ್ಟ ಬೊಮ್ಮನಳ್ಳಿ ೮೦ರ ಸಂಭ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು.

ಯಲ್ಲಾಪುರ: ಬೊಮ್ಮನಹಳ್ಳಿಯ ಜಿ.ಟಿ. ಭಟ್ಟರ ವ್ಯಕ್ತಿತ್ವ ಗಮನಿಸಿದರೆ, ಅವರ ನಡೆ ಆದರ್ಶ ಶಿಕ್ಷಕರೆಂಬುದಕ್ಕೆ ಬೇರಾವ ಮಾನ್ಯತೆಯೂ ಅಗತ್ಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಮೇ ೧೯ರಂದು ತಾಲೂಕಿನ ಮಂಚೀಕೇರಿಯ ರಾ.ರಾ. ರಂಗಮಂದಿರದಲ್ಲಿ ನಿವೃತ್ತ ಶಿಕ್ಷಕ ಮುಖ್ಯಾಧ್ಯಾಪಕ ಜಿ.ಟಿ. ಭಟ್ಟ ಬೊಮ್ಮನಳ್ಳಿ ೮೦ರ ಸಂಭ್ರಮ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿ.ಟಿ. ಭಟ್ಟರ ಕುರಿತು ಮಾಹಿತಿ ಸಂಗ್ರಹಿಸಿದಾಗ ಉತ್ತಮ ಶಿಕ್ಷಕರಾಗಿದ್ದರಲ್ಲದೇ, ಯಕ್ಷಗಾನ, ನಾಟಕ, ಸಾಹಿತ್ಯ ಮತ್ತಿತರ ವಿವಿಧ ಕ್ಷೇತ್ರಗಳಲ್ಲಿಯೂ ತಮ್ಮ ಪ್ರೌಢಿಮೆಯಿಂದ ವಿದ್ಯಾರ್ಥಿಗಳಿಗೆ ನೂತನ ಆದರ್ಶವೆನಿಸುವ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂದರು.

ಬೊಮ್ಮನಹಳ್ಳಿ ಜಂಗಮ ಅಭಿನಂದನಾ ಗ್ರಂಥವನ್ನು ಕವಿ, ಕಥೆಗಾರ ಜಯಂತ ಕಾಯ್ಕಿಣಿ ಲೋಕಾರ್ಪಣೆಗೊಳಿಸಿ, ಜಿ.ಟಿ. ಭಟ್ಟರಂಥ ಮಾಸ್ತರರು ಪ್ರತಿ ಶಾಲೆಗೊಬ್ಬರಿದ್ದರೆ ಅಲ್ಲಿನ ವಿದ್ಯಾರ್ಥಿಗಳು ಶ್ರೇಷ್ಠರಾಗಿ ಹೊರಹೊಮ್ಮಲು ಸಾಧ್ಯ. ಕೇವಲ ಪಠ್ಯಕ್ಕೊಂದೇ ಸೀಮಿತರಾಗಿರದೇ, ಪಠ್ಯದಾಚೆಯ ಬದುಕಿನ, ಸಮಾಜದ ಕುರಿತಾದ ಅನೇಕ ತರಬೇತಿಗಳನ್ನು ಇಂತಹ ಶಿಕ್ಷಕರು ನೀಡಬಹುದಾಗಿದ್ದು, ಮಕ್ಕಳಿಗೆ ಅಗತ್ಯವಾದ ಹೊಸ ಚಿಂತನೆಯ ಮತ್ತು ಜೀವನದ ಅರ್ಥದ ಪಾಠವನ್ನು ಹಿಂದಿನ ಶಿಕ್ಷಕರು ನೀಡುತ್ತಿದ್ದರು ಎಂದರು.

ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಶರ್ಮಾ ಮಾತನಾಡಿ, ಜಿ.ಟಿ. ಭಟ್ಟರು ತಮ್ಮ ಬದುಕಿನ ಜತೆ ಎಲ್ಲರ ಬದುಕಿಗೆ ದಾರಿದೀಪವಾಗಿದ್ದರು. ಅನೇಕ ವರ್ಷಗಳಿಂದ ಅವರ ಕುಟುಂಬದ ಸದಸ್ಯರಾಗಿ ಹತ್ತಿರದಿಂದ ಕಂಡಿದ್ದೇನೆ. ಎಲ್ಲ ಸಂದರ್ಭದಲ್ಲಿ ಭಟ್ಟರು ಪಾದರಸದಂತೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಹಳ್ಳಿಗಳಲ್ಲೂ ಅವರು ಅಪೂರ್ವ ಸಾಧನೆ ಮಾಡಿದ್ದಾರೆ ಎಂದರು.

ಹೊನ್ನಾವರದ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿ, ಯಕ್ಷಗಾನದಂತಹ ಕಲೆಯನ್ನೂ ತನ್ನ ವೃತ್ತಿಯ ಜತೆ ಅಳವಡಿಸಿಕೊಂಡು ನಗುವೇ ಜೀವನವೆಂಬಂತೆ ಇಂತಹ ಹಳ್ಳಿಗಳಲ್ಲಿ ಕಲೆಗಳಿಗೆ ಶಕ್ತಿತುಂಬಿ ಭವಿಷ್ಯತ್ತಿನ ಸತ್ಪ್ರಜೆಗಳಾಗಿಸುವಲ್ಲಿ ಜಿ.ಟಿ. ಭಟ್ಟರ ಕೊಡುಗೆ ಅನನ್ಯ ಎಂದರು. ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇಂದು ದೃಶ್ಯ ಮಾಧ್ಯಮಗಳನ್ನು ನೋಡಿದರೆ ಬೆಳಗಿನಿಂದ ಸಂಜೆಯವರೆಗೂ ಕಷ್ಟ, ನೋವು, ದುಃಖಗಳಂತಹ ಸನ್ನಿವೇಶಗಳನ್ನೇ ನೋಡುವ ಸ್ಥಿತಿ ಬಂದೊದಗಿದೆ. ಆದರೆ, ಜಿ.ಟಿ. ಭಟ್ಟರ ನಗೆಯೇ ಈ ಜಿಲ್ಲೆಯ ಮಣ್ಣಿನ ಸತ್ವವೆನ್ನಬಹುದು ಎಂದರು.

ಹೆಗ್ಗೋಡಿನ ರಂಗನಿರ್ದೇಶಕ ಚಿದಂಬರರಾವ್ ಜಂಬೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ ಸಂಕ್ಷಿಪ್ತವಾಗಿ ಮಾತನಾಡಿದರು. ಶಿಷ್ಯರಾದ ನಾಗಭೂಷಣ ಹೆಗಡೆ ಬಾಳೆಹದ್ದ, ಡಾ. ಕೃಷ್ಣಮೂರ್ತಿ ಭಟ್ಟ, ಪ್ರಸನ್ನ ವೈದ್ಯ, ಎಂ.ಕೆ. ಭಟ್ಟ, ಮಮತಾ ಹೆಗಡೆ, ಪ್ರತಿಭಾ ರಾಘವೇಂದ್ರ, ಉಷಾ, ವಿದ್ಯಾ ಸಂಗಡಿಗರು ಹಾಡಿದ ಸುಂದರ ಗೀತೆ ಮತ್ತು ವೆಂಕಟರಮಣ ಗುಡ್ಡೆಯವರ ಯಕ್ಷನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಭಿನಂದನಾ ಸಮಿತಿ ಸಂಚಾಲಕ ಜಿ.ಎನ್. ಶಾಸ್ತ್ರಿ ಸ್ವಾಗತಿಸಿದರು. ರಂಗಸಮೂಹದ ಮುಖ್ಯಸ್ಥ ಆರ್.ಎನ್. ಭಟ್ಟ ದುಂಡಿ ಪ್ರಾಸ್ತಾವಿಕ ಮಾತನಾಡಿದರು.

ರಂಗಕರ್ಮಿ ರಮಾನಂದ ಐನಕೈ ಮಾತನಾಡಿದರು. ಮುರಾರಿ ಭಟ್ಟ ಹಿತ್ಲಳ್ಳಿ, ಜಯಲಕ್ಷ್ಮೀ ಹೆಗಡೆ ಬೆದೆಹಕ್ಕಲು ಅಭಿಪ್ರಾಯ ಹಂಚಿಕೊಂಡರು. ರಾ.ರಾ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಾಸುಕಿ ಮಳಗೀಮನೆ ಸನ್ಮಾನ ಪತ್ರ ವಾಚಿಸಿದರು. ಜಿ.ಟಿ. ಭಟ್ಟರ ಪುತ್ರಿಯರಾದ ಡಾ. ಶೀಲಾ, ಉಷಾ, ಜ್ಯೋತಿ ನಿರ್ವಹಿಸಿದರು. ಸಂಘಟಕರಲ್ಲೊಬ್ಬರಾದ ವಿಶ್ವನಾಥ ಹೆಗಡೆ ಬಾಮಣಕೊಪ್ಪ ವಂದಿಸಿದರು.

ಕಾರ್ಯಕ್ರಮದ ಪ್ರಯುಕ್ತ ಸಭಾ ಕಾರ್ಯಕ್ರಮದ ತರುವಾಯ ಪ್ರಸ್ತುತಗೊಂಡ ವಾಮನಚರಿತ್ರೆ ತಾಳಮದ್ದಲೆಯಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆ ವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆ ವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಕಾರ್ಯನಿರ್ವಹಿಸಿದರು. ಅರ್ಥಧಾರಿಗಳಾಗಿ ಜಬ್ಬಾರ್ ಸಮೋ(ಬಲಿ), ರಾಧಾಕೃಷ್ಣ ಕಲ್ಚಾರ್(ವಾಮನ) ಹಾಗೂ ವಿ. ಉಮಾಕಾಂತ ಭಟ್ಟ ಕೆರೆಕೈ(ಶುಕ್ರಾಚಾರ್ಯ) ವಿವಿಧ ಪಾತ್ರಗಳಲ್ಲಿ ತಮ್ಮ ವಿದ್ವತ್ ತೋರಿದರು.