ಗ್ರಾಪಂಗಳಿಂದ ಪಪಂ, ನಗರಸಭೆಯಾಗಿ ಮೇಲ್ದರ್ಜೇಗೇರಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಸುಧಾರಣೆಯಾಗಿವೆ. ಆರಂಭದಲ್ಲಿ ಖಾತೆ ಕೊಡುತ್ತಿಲ್ಲ, ದುಡ್ಡು ಜಾಸ್ತಿ ಕೇಳುತ್ತಿದ್ದಾರೆ, ಕಂದಾಯ ದ್ವಿಗುಣ ಮಾಡಲಾಗಿದೆ, ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿದ್ದವು. ಈಗ ಸಾಕಷ್ಟು ಸುಧಾರಿಸಿ ದೂರುಗಳು ಕಡಿಮೆಯಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಗ್ರೇಡ್-1 ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚನೆ ಮಾಡಿ ಯಾವುದೇ ಸಂದರ್ಭದಲ್ಲಿ ಅಧಿಸೂಚನೆ ಹೊರಡಿಸುವ ಕಾರಣ ಒಂದು ತಿಂಗಳಲ್ಲಿ ನಗರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಬರುವ ಆಸ್ತಿಗಳು, ಬಡಾವಣೆಗಳು ಸೇರಿದಂತೆ ಸಂಪೂರ್ಣ ಮಾಹಿತಿ ತಯಾರಿಸಿ ಸಿದ್ಧವಿಟ್ಟುಕೊಳ್ಳುವಂತೆ ಶಾಸಕ ಜಿ.ಟಿ. ದೇವೇಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.

ನಗರ ಪಾಲಿಕೆ ವಲಯ ಕಚೇರಿ-3ರಲ್ಲಿ ಶನಿವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಪಾಲಿಕೆ ವಲಯ ಕಚೇರಿ, ಪಟ್ಟಣ ಪಂಚಾಯ್ತಿ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂಗಳಿಂದ ಪಪಂ, ನಗರಸಭೆಯಾಗಿ ಮೇಲ್ದರ್ಜೇಗೇರಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಸುಧಾರಣೆಯಾಗಿವೆ. ಆರಂಭದಲ್ಲಿ ಖಾತೆ ಕೊಡುತ್ತಿಲ್ಲ, ದುಡ್ಡು ಜಾಸ್ತಿ ಕೇಳುತ್ತಿದ್ದಾರೆ, ಕಂದಾಯ ದ್ವಿಗುಣ ಮಾಡಲಾಗಿದೆ, ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿದ್ದವು. ಈಗ ಸಾಕಷ್ಟು ಸುಧಾರಿಸಿ ದೂರುಗಳು ಕಡಿಮೆಯಾಗಿವೆ ಎಂದರು.

ಗ್ರೇಡ್-1 ಮೈಸೂರು ನಗರ ಪಾಲಿಕೆಯನ್ನಾಗಿ ಮಾಡಲು ತೀರ್ಮಾನ ಮಾಡಿರುವುದರಿಂದ ಸರ್ಕಾರ ದಿಢೀರನೇ ಅಧಿಸೂಚನೆ ಹೊರಡಿಸಬಹುದು. ಪಪಂ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ತಿಗಳು, ಮನೆಗಳು, ಗ್ರಾಮಗಳು, ಬಡಾವಣೆಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು, ಆಸ್ಪತ್ರೆಗಳು ಎಷ್ಟು ಇವೆ ಎಂಬುದನ್ನು ವರದಿ ಮಾಡಬೇಕು. ಅದೇ ರೀತಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ, ಬೀದಿ ದೀಪಗಳ, ರಸ್ತೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ವರದಿ ತಯಾರಿಸಿಕೊಳ್ಳಬೇಕು. ಈ ಕೆಲಸವಾದರೆ ವಲಯ ಕಚೇರಿ ಸ್ಥಾಪಿಸಿ ಸುಗಮವಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯವಾಗಲಿದೆ ಎಂದರು.

ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿಕೊಂಡು ಮುಂದಿನ ತಿಂಗಳಿಗೆ ಒಂದು ವರ್ಷವಾಗಲಿದೆ. ಇಲ್ಲಿಯವರೆಗೆ ಏನೇನು ಆಗಿದೆ, ಮುಂದೆ ಏನೇನು ಕೆಲಸಗಳು ಆಗಬೇಕು. ಸಮಸ್ಯೆ ಪರಿಹಾರಕ್ಕೆ ಯಾವ ಪರಿಹಾರ ಆಗಬೇಕು ಎಂಬುದನ್ನು ಗಮನಿಸಬೇಕು. ನಿವೇಶನಗಳು, ಮನೆಗಳಲ್ಲಿ ಎಷ್ಟು ಖಾತೆಗಳಾಗಿವೆ, ಎಷ್ಟು ಬಾಕಿ ಇವೆ ಎಂಬುದರ ಬಗ್ಗೆ ಮ್ಯಾಪ್ ಸಮೇತ ಒಂದು ಸಮಗ್ರ ವರದಿ ಇರಬೇಕು ಎಂದರು.

ಪಾಲಿಕೆಗೆ ಹಸ್ತಾಂತರವಾದ ಮೇಲೆ ಅಪಾರ ಸಮಸ್ಯೆಗಳು ಎದುರಾಗಿ ಬಿಡುವ ಸಾಧ್ಯತೆ ಇರುತ್ತದೆ. ಅದನ್ನು ನಾವು ಎದುರಿಸಬೇಕಾಗುತ್ತದೆ. ಮುಂದೆ ವಲಯ ಕಚೇರಿಗಳನ್ನು ವಿಸ್ತರಿಸಿ ಅಧಿಕಾರಿಗಳನ್ನು ನೇಮಕ ಮಾಡಿದ ಮೇಲೆ ಯಥಾಸ್ಥಿತಿಯಲ್ಲಿ ಆಡಳಿತ ಸಾಗಬೇಕು. ಜನರಿಗೆ ಎಂದಿನಂತೆ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಮಾಡುವಂತೆ ಮಾಡಬಹುದು ಎಂದರು.

ಸ್ಮಶಾನಗಳ ಅಭಿವೃದ್ಧಿ:

ಪಪಂ ಮತ್ತು ನಗರಸಭೆ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಅಭಿವೃದ್ಧಿಗೆ ಕೂಡಲೇ ಟೆಂಡರ್ ಕರೆದು ಸ್ಮಶಾನಗಳ ಅಭಿವೃದ್ಧಿ ಮಾಡಬೇಕು. ಮುಡಾದಿಂದ ನಿರ್ಮಿಸಿದ ಹಾಗೂ ಅನುಮೋದಿಸಿದ ಖಾಸಗಿ ಬಡಾವಣೆಗಳನ್ನು ಹಸ್ತಾಂತರಿಸುವಾಗ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಇರುವ ಬಡಾವಣೆಗಳಿಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳು, ನಗರಾಭಿವೃದ್ದಿ ಸಚಿವರ ಗಮನಕ್ಕೆ ತರಲಾಗಿದ್ದು, ಶೀಘ್ರ ಸಭೆ ನಡೆಸಿ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದರು.

ಮೂಲ ಸೌಕರ್ಯಗಳನ್ನು ಕಲ್ಪಿಸದೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗಿದೆ. ಈಗ ಬಡಾವಣೆಗಳಿಗೆ ಆಗಬೇಕಿರುವ ಕೆಲಸಗಳಿಗೆ ಅನುದಾನದ ಕೊರತೆ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಹೇಳಿದ್ದರಿಂದ ಸಚಿವರು ಒಪ್ಪಿದ್ದಾರೆ. ಯಾವ್ಯಾವ ಬಡಾವಣೆಗಳಲ್ಲಿ ಏನೇನು ಕೆಲಸಗಳು ಆಗಬೇಕೆಂದು ಪಟ್ಟಿ ತಯಾರಿಸಿದರೆ ಸಚಿವರ ಸಭೆಯಲ್ಲಿ ಮಂಡಿಸಿ ಅನುದಾನ ಬಿಡುಗಡೆಗೆ ಒಪ್ಪಿಗೆ ಪಡೆಯಬಹುದು ಎಂದರು.

ಮುಖ್ಯಾಧಿಕಾರಿಗಳು, ಪೌರಾಯುಕ್ತರು ತಕ್ಷಣವೇ ತಮ್ಮ ವ್ಯಾಪ್ತಿಯಲ್ಲಿ ಹಸ್ತಾಂತರ ಮಾಡಿಕೊಂಡಿರುವ ಬಡಾವಣೆಗಳಿಗೆ ಸಂಬಂಧಿಸಿದ ಪೂರ್ಣ ವಿವರವನ್ನು ರೆಡಿ ಮಾಡಿ ಕೊಡಬೇಕು. ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ನಗರ ಪಾಲಿಕೆ ಉಪ ಆಯುಕ್ತರಾದ ಜಿ.ಎಸ್. ಸೋಮಶೇಖರ್, ಎಸ್. ಮಂಜು, ಕಾರ್ಯಪಾಲಕ ಎಂಜಿನಿಯರ್ ಆರ್. ಶ್ರೀನಿವಾಸ್, ವಲಯ-3ರ ಸಹಾಯಕ ಆಯುಕ್ತ ಸಂದೀಪ್, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಪಪಂ ಮುಖ್ಯಾಧಿಕಾರಿಗಳಾದ ಎಚ್.ಎಂ. ಸುರೇಶ್, ಎಚ್.ಆರ್. ದೀಪಾ, ರವಿಕೀರ್ತಿ, ಎಸ್.ಎಂ. ಸುಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಸಿಡಿಪಿಒ ಸುಬ್ಬಯ್ಯ, ಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳಾದ ಧನುಷ್, ಮಧುಸೂದನ್, ಮೋಹನಕುಮಾರಿ, ನಾಗರಾಜೇಗೌಡ, ಪಿಆರ್‌ ಇಡಿ ಎಇಇ ಮೆಹಬೂಬ್, ನಿರ್ಮಿತಿ ಕೇಂದ್ರದ ಎಇಇ ಶ್ವೇತಾ, ತೋಟಗಾರಿಕೆ ಎಇಇ ಪುನೀತ್‌ ಕುಮಾರ್ ಮೊದಲಾದವರು ಇದ್ದರು.ಟಾಸ್ಕ್‌ ಫೋರ್ಸ್ ರಚಿಸಿ

ಕಂದಾಯ ವಸೂಲಿ ಮಾಡುವ ಬಗ್ಗೆ ಪ್ರತ್ಯೇಕ ಟಾಸ್ಕ್‌ ಫೋರ್ಸ್ ರಚನೆ ಮಾಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ಗ್ರಾಮಗಳು, ಬಡಾವಣೆಗಳಿಗೆ ಹೋದಾಗ ಸ್ಥಳೀಯಜನರನ್ನು ಸೇರಿಸಿ ಮುಂದೆ ನಗರಪಾಲಿಕೆಗೆ ಸೇರಿಕೊಳ್ಳುತ್ತದೆ. ಅಲ್ಲಿಯವರೆಗೆ ಕಂದಾಯ ಪಾವತಿಸಿ ಅಪ್‌ ಡೇಟ್ ಮಾಡಿಸಿಕೊಳ್ಳಬೇಕು. ಪಾಲಿಕೆಗೆ ಸೇರಿದ ಮೇಲೆ ಕಂದಾಯ ದ್ವಿಗುಣವಾಗಲಿದೆ. ಕಂದಾಯದಲ್ಲೂ ಏರಿಕೆಯಾಗಲಿದೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೆಯೇ, ಕಂದಾಯ ಬಾಕಿಉಳಿಸಿಕೊಂಡರೆ ಹಸ್ತಾಂತರ ಮಾಡುವಾಗ ಸಮಸ್ಯೆಯಾಗಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.