ಹಾವೇರಿ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕಾಗಿ ಪರದಾಟ ಮುಂದುವರಿದಿದೆ. ಶುಕ್ರವಾರ ಜಿಟಿಜಿಟಿ ಮಳೆಯಲ್ಲೇ ರೈತರು ಮುಗಿಬಿದ್ದು ಬೀಜ ಖರೀದಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕಾಗಿ ಪರದಾಟ ಮುಂದುವರಿದಿದೆ. ಶುಕ್ರವಾರ ಜಿಟಿಜಿಟಿ ಮಳೆಯಲ್ಲೇ ರೈತರು ಮುಗಿಬಿದ್ದು ಬೀಜ ಖರೀದಿಸಿದರು.ಬೀಜ ಖರೀದಿಗೆ ಗುರುವಾರ ನೂಕುನುಗ್ಗಲು ಉಂಟಾಗಿದ್ದರಿಂದ ಎಚ್ಚೆತ್ತುಕೊಂಡ ಕೃಷಿ ಇಲಾಖೆ ರೈತರಿಗೆ ಕೂಪನ್ ವ್ಯವಸ್ಥೆ ಮಾಡಿತ್ತು. ಕೂಪನ್‌ಗೆ ಅನುಗುಣವಾಗಿ ರೈತರಿಗೆ ಬೀಜ ವಿತರಣೆ ಮಾಡಲಾಯಿತು. ಆದರೂ ಕೆಲ ರೈತರು ಸಮಾಧಾನದಿಂದ ಕಾಯದೇ ಬೀಜಕ್ಕಾಗಿ ಮುಗಿಬಿದ್ದು ಪೊಲೀಸರೊಂದಿಗೆ ವಾಗ್ವಾದ ನಡೆಸುವ ದೃಶ್ಯ ಸಾಮಾನ್ಯವಾಗಿತ್ತು.ಸೋಯಾಬಿನ್ ಬೀಜಕ್ಕೆ ಕೃಷಿ ಇಲಾಖೆ ಮೊದಲೇ ಬೇಡಿಕೆ ಸಲ್ಲಿಸಿದ್ದರೂ ಪೂರೈಕೆಯಲ್ಲಿ ವಿಳಂಬವಾಗಿದೆ. ಸೋಯಾಬಿನ್ ಬಿತ್ತನೆ ಬೀಜಗಳು ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬರಬೇಕಿರುವುದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗಿದೆ. ಕೆಲ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳ ಬಂಕ್‌ಗಳಲ್ಲಿ ಡೀಸೆಲ್‌ ಅಭಾವ ಉಂಟಾಗಿದೆ. ಹೀಗಾಗಿ ಲಾರಿಗಳು ದಿನಗಟ್ಟಲೇ ನಿಂತು ಡೀಸೆಲ್ ಹಾಕಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಪರಿಣಾಮ ಗುರುವಾರ ಬರಬೇಕಿದ್ದ ಸೋಯಾಬಿನ್ ಹೊತ್ತ ಲಾರಿ ಶುಕ್ರವಾರ ಮಧ್ಯಾಹ್ನ ಹಾವೇರಿಗೆ ಬಂದಿದೆ. ಸೋಮವಾರ ಮತ್ತೊಂದು ಲಾರಿ ಬರಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.ಈ ಬಾರಿ ಸೋಯಾಬಿನ್ ಬೀಜಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಸೋಯಾಬೀನ್ ಬಿತ್ತನೆ ಮಾಡುವಾಗ ಭೂಮಿಯ ತೇವಾಂಶ ಕಡಿಮೆ ಇದ್ದಲ್ಲಿ ಯಾರು ಬಿತ್ತನೆ ಮಾಡಬಾರದು. ಒಂದು ವೇಳೆ ಕಡಿಮೆ ತೇವಾಂಶದಲ್ಲಿ ಬಿತ್ತನೆ ಮಾಡಿದರೆ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪೂರ್ಣ ಪ್ರಮಾಣದ ತೇವಾಂಶವನ್ನು ಖಚಿತಪಡಿಸಿಕೊಂಡು ಸೋಯಾಬೀನ್ ಬಿತ್ತನೆ ಮಾಡಬೇಕು ಎಂದು ಹಾವೇರಿ ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಕೆ. ಹೇಳಿದರು.