೨೦ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೀಘ್ರ ದಿನಾಂಕ ನಿಗದಿಪಡಿಸಿ ಗ್ಯಾರಂಟಿ ಅದಾಲತ್‌ ನಡೆಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ತಿಳಿಸಿದ್ದಾರೆ.

ಕಾರ್ಕಳ: ಪುರಸಭೆ ಸೇರಿದಂತೆ ಈಗಾಗಲೇ ಎಂಟು ಕಡೆಗಳಲ್ಲಿ ಗ್ಯಾರಂಟಿ ಅದಾಲತ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಬಾಕಿ ಉಳಿದಿರುವ ೨೦ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೀಘ್ರ ದಿನಾಂಕ ನಿಗದಿಪಡಿಸಿ ಗ್ಯಾರಂಟಿ ಅದಾಲತ್‌ ನಡೆಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ತಿಳಿಸಿದ್ದಾರೆ.

ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಜನರಿಗೆ ನೇರವಾಗಿ ತಲುಪುವಂತೆ ಮಾಡುವ ಉದ್ದೇಶದಿಂದ ಗ್ಯಾರಂಟಿ ಅದಾಲತ್‌ಗಳನ್ನು ಆಯೋಜಿಸಲಾಗುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಸಿಡಿಪಿಒ, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕಂತುಗಳ ಜಮಾ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ ಒಟ್ಟು ನಾಲ್ಕು ತಿಂಗಳಿನ ಮೊತ್ತ ಬಾಕಿಯಿರುವುದಾಗಿ ಮಾಹಿತಿ ನೀಡಿದರು. ಜೊತೆಗೆ ೨೦೨೫ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಹಲವಾರು ಫಲಾನುಭವಿಗಳ ಖಾತೆಗೆ ಜಮೆಯಾಗದಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಆಹಾರ ನಿರೀಕ್ಷಕಿ ಸುಮತಿ ಮಾತನಾಡಿ, ಆದಾಯ ತೆರಿಗೆ ಪಾವತಿಸುವ ೩,೫೭೦ ಪಡಿತರ ಚೀಟಿಗಳು ಪರಿಶೀಲನೆಗೆ ಒಳಪಟ್ಟಿರುವುದಾಗಿ ತಿಳಿಸಿದರು. ಈ ಪೈಕಿ ಈಗಾಗಲೇ ೨,೮೬೭ ಪಡಿತರ ಚೀಟಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಇನ್ನೂ ೨೬೪ ಚೀಟಿಗಳು ಪರಿಶೀಲನೆಗೆ ಬಾಕಿಯಿವೆ ಎಂದರು. ಪರಿಶೀಲನೆಯ ಬಳಿಕ ಆದಾಯ ತೆರಿಗೆ ಪಾವತಿಸುವ ೧೭೭ ಪಡಿತರ ಚೀಟಿಗಳು ಹಾಗೂ ಕಳೆದ ಒಂದು ವರ್ಷದಿಂದ ಪಡಿತರ ಸಾಮಗ್ರಿಗಳನ್ನು ಪಡೆಯದೇ ಇರುವ ೨೬೧ ಚೀಟಿಗಳನ್ನು ಎಪಿಎಲ್ ವರ್ಗಕ್ಕೆ ಪರಿವರ್ತಿಸಲಾಗಿದೆ ಎಂದು ವಿವರಿಸಿದರು.ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಯುವನಿಧಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಗೈರಾಗಿರುವುದಕ್ಕೆ ಸಮಿತಿಯ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಗೆ ಒಂದು ವರ್ಷ ಪೂರ್ತಿ:

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಯೋಜನೆಗಳ ಯಶಸ್ವಿ ಅನುಷ್ಟಾನಕ್ಕೆ ಶ್ರಮಿಸಿದ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಹಕರಿಸಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಮಾತನಾಡಿದರು. ಸಮಿತಿ ಸದಸ್ಯರಾದ ಸಂತೋಷ್ ದೇವಾಡಿಗ ಬೋಳ, ಸಂತೋಷ್ ಶೆಟ್ಟಿ ನಿಂಜೂರು, ಪಿಲಿಫ್ ಮೆಸ್ಕಾರೇನಸ್, ವಿಶ್ವನಾಥ ಭಂಡಾರಿ ಕುಕ್ಕುಂದೂರು, ಸಹೀಮ್ ಅಯ್ಯಪ್ಪನಗರ, ಜಯ ಕುಲಾಲ್ ಇರ್ವತ್ತೂರು, ಚರಿತ್ರ ಶೆಟ್ಟಿ ಅಜೆಕಾರು, ಸುರೇಶ್ ಆಚಾರ್ಯ ಈದು, ಹೇಮಂತ್ ಆಚಾರ್ಯ, ಶೋಭಾ, ರಜನಿ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದರು. ಮೆಸ್ಕಾಂ ವಿಭಾಗದ ಶಿಲ್ಪಾ ಎಸ್. ಶೆಟ್ಟಿ, ವಿನಾಯಕ ಕೆ. ಕಾಮತ್ ಹಾಗೂ ಕೆಎಸ್‌ಆರ್‌ಟಿಸಿ ಪ್ರತಿನಿಧಿ ವೀರಾಧಾರ್ ಮತ್ತಿತರರಿದ್ದರು.