ಸಾರಾಂಶ
ಹಾವೇರಿ: ಕಾಂಗ್ರೆಸ್ಸಿನವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಅದಕ್ಕಾಗಿ ಕಾಂಗ್ರೆಸ್ ನೀಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಕಿಮ್ಮತ್ತಿಲ್ಲ. ಚುನಾವಣೆ ಮುಗಿದ ಮೇಲೆ ಅವರು ಮನೆಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ವಿಧಾನಸಭಾ ಕ್ಷೇತ್ರದ ಅಗಡಿ, ಕಾಟೇನಹಳ್ಳಿ, ಕಳ್ಳಿಹಾಳ ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಹುಂಡೇನಹಳ್ಳಿ, ಮೋಟೆಬೆನ್ನೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೆಸ್‌ನವರು ಸ್ಪರ್ಧೆ ಮಾಡಿರುವುದೇ ೨೦೦ ಸ್ಥಾನಗಳಲ್ಲಿ, ಲೋಕಸಭೆಯಲ್ಲಿ ಬಹುಮತಕ್ಕೆ ೨೭೨ ಸ್ಥಾನಗಳು ಬೇಕು. ಹೀಗಾಗಿ ಕಾಂಗ್ರೆಸ್ ಕೊಡುವ ಗ್ಯಾರಂಟಿ ಕಾರ್ಡ್ ಗಳಿಗೆ ಕಿಮ್ಮತ್ತಿಲ್ಲ. ಅವುಗಳನ್ನು ಹರಿದು ಹಾಕಿ ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟಿದ್ದರು. ಈಗಲೂ ರಾಜ್ಯದಲ್ಲಿ ಮೋದಿಯವರೇ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶದ ೧೩೦ ಕೋಟಿ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದಾರೆ. ಕಷ್ಟದಲ್ಲಿದ್ದಾಗ ಅನ್ನ, ನೀರು ಆರೋಗ್ಯ ಕೊಟ್ಟಿರುವ ನರೇಂದ್ರ ಮೋದಿಯವರ ಋಣ ತೀರಿಸುವ ಕೆಲಸ ಮಾಡಬೇಕು. ಮೋದಿಯವರಿಗೆ ಮತ ಹಾಕುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.